ಬುಧವಾರ, ಮಾರ್ಚ್ 14, 2018

ವಚನ ಸಾಹಿತ್ಯ || vachana sahitya

ವಚನ ಸಾಹಿತ್ಯ


ಧಾರ್ಮಿಕತೆ, ಆಚಾರ, ವಿಚಾರವಂತಿಕೆ, ಸರ್ವಧರ್ಮ ಸಮನ್ವಯತೆ, ಸರ್ವರನ್ನು ಪ್ರೀತಿಯಿಂದ ಕಾಣುವ ನೋಟ, ಸೋಹ ಎನ್ನದೆ ದಾಸೋಹ ಎನ್ನುವ ಮನೋಭಾವನೆ ಭಾರತದ ಕಣ ಕಣದಲ್ಲೂ ತುಂಬಿ ತುಳುಕುತ್ತಿದೆ. ಭಕ್ತಿಯ ಭಾವನೆಯಿಂದ ವಿಶ್ವದ ಅತ್ಯುನ್ನತ ಸ್ಥಾನ ತಲುಪಿದೆ ಎಂದು ಹೇಳಬಹುದು. ನಮ್ಮ ನೆಲದಲ್ಲಿ ಅದೆಷ್ಟೋ ಯೋಗಿ ಮಹಾಂತರು , ದಾಸ ಶ್ರೇಷ್ಠರು, ಕವಿಗಳು, ವಿಜ್ಞಾನಿಗಳು, ತತ್ವಜ್ಞಾನಿಗಳು, ವಿದ್ವಾಂಸರು, ಚಿನ್ಮಯಜ್ಞಾನಿಗಳು ನಾಡಿನ ಉದ್ದಗಲಕ್ಕೂ ಆವತರಿಸಿ ತವು ಕಂಡ ಸತ್ಯದ ಸಾಕ್ಷಾತ್ಕಾರವನ್ನು ನಾಡಿಗೆ ಬಳುವಳಿಯಾಗಿ ನೀಡಿ ಭಾರತೀಯ ಸಂಸ್ರೃತಿಯನ್ನು ಉನ್ನತ ಮಟ್ಟಕ್ಕೇರಿಸಿದ್ದಾರೆ.
ಅಂಗ ಶುದ್ಧಿಯ ಜೊತೆಗೆ ಅಂತರಂಗ ಶುದ್ಧಿ ಮಾಡಿಕೊಂಡು ಜಗದಗಲ ವ್ಯಾಪಿಸಿ ನಾಡಿನ ಹಿತವನ್ನು ಸಂರಕ್ಷಿಸಿದ ಪ್ರಶಂಸೆ ನಮ್ಮ ಯೋಗಿ ಮಹಾಂತರಿಗೆ ಲಭಿಸಿದೆ ಎಂದು ಹೇಳಬಹುದಾಗಿದೆ.
ನಮ್ಮ ಭಾರತೀಯ ಸಂಸ್ರೃತಿಯ ಪ್ರತೀಕ ನಮ್ಮ ಹಿರಿಯರು ರಚಿಸಿದ ಸಾಹಿತ್ಯ. ಒಂದಕ್ಕಿಂತ ಒಂದು ವಿಭಿನ್ನ ಹಾಗೂ ವೈಶಿಷ್ಟ್ಯಪೂರ್ಣವಾಗಿದೆ. ಉದಾಹರಣೆಗೆ ನೋಡುವುದಾದರೆ ನಮ್ಮ ಬಸವಾದಿ ಶರಣರು ಕರುಣಿಸಿದ ವಚನ ಸಾಹಿತ್ಯ, ದಾಸ ಶ್ರೇಷ್ಠರು ನೀಡಿದ ದಾಸ ಸಾಹಿತ್ಯಗಳು ವಿಶ್ವದ ಅತ್ಯಂತ ಉನ್ನತ ಸ್ಥಾನವನ್ನು ಪಡೆಡಿದೆ. ಖುಗ್ವೇದ, ಯಜುರ್ವೇದ, ಸಾಮವೇದ, ಅಥರ್ವಣವೇದಗಳು  ನಮ್ಮ ಭರತ ಭೂಮಿಯದಾಗಿದೆ. ರಾಮಾಯಣ, ಮಹಾ ಭಾರತ ಕಾವ್ಯಗಳು ಎಲ್ಲರಿಗೂ ಚಿರಪರಿಚಿತವೇ ಸರಿ. ಇದರ ಜೊತೆಗೆ ನಾಡಿನ ತುಂಬೆಲ್ಲಾ ಹರಡಿರುವ ನಮ್ಮ ಜನಪದರು. ಇವರು ಕಟ್ಟಿದ ಸಾಲಿಗೆ ಸರಿ ಸಮವೇ ಇಲ್ಲ. ಜನಪದರು ಕಟ್ಟಿದ ಸಾಲುಗಳನ್ನು ಗಾದೆ ಎಂದು ಕರೆಯುತ್ತಾರೆ. ಇದರ ಕುರಿತು "ಗಾದೆಗಳು ವೇದಗಳಿಗೆ ಸಮ. ವೇದ ಸುಳ್ಳಾದರೂ, ಗಾದೆ ಸುಳ್ಳಾಗದು" ಎಂದಿದ್ದಾರೆ ನಮ್ಮ ಹಿರಿಯರು. ಕಾರಣ ಗಾದೆಗಳು ಹಿರಿಯರ ಜ್ಞಾನಾನುಭವಗಳ ಸಾರ ಸರ್ವಸ್ವವನ್ನು ಉಳಿಸಿಕೊಂಡು ಬೆಳೆಸುವಲ್ಲಿ ಯಶಸ್ವಿಯಾಗಿವೆ.
ವಚನಗಳೂ ಸಹಿತ ಒಂದು ಬಗೆಯ ಗಾದೆಗಳು ಎಂದರೆ ತಪ್ಪಾಗಲಾರದು. ಹೇಗೆಂದರೆ, ವಚನಗಳೂ ಸಹಿತ ಜ್ಞಾನಾನುಭವಗಳ ಸಾರವನ್ನು ಒಳಗೊಂಡಿದೆ. ಜನಸಾಮಾನ್ಯರಿಗೆ ಸುಲಭವಾಗಿ, ಸರಳವಾಗಿ ಅರ್ಥವಾಗುತ್ತದೆ. ಗಾದೆಗಳಿಗೆ ಮತ್ತು  ವಚನಗಳಿಗಿರುವ ಕೊಂಚ ವ್ಯತ್ಯಾಸವೆಂದರೆ, ಗಾದೆಗಳು ತಾನು ಆವಿರ್ಭವಿಸಿದ ಸ್ಥಾನವನ್ನು ಹೆಸರಿಸಿಲ್ಲ ಆದರೆ ವಚನಗಳು ವಚನಾಂಕಿತದಿಂದ ಆವಿರ್ಭವಿಸಿದ ಸ್ಥಾನವನ್ನು ತಿಳಿಸುತ್ತವೆ.
ಅನುಭವ ಮಂಟಪದಿ ಪ್ರಜ್ವಲಿಸಿದ ಮಹಾ ದೀವಿಗೆಗಳು ವಚನಗಳು. ಜನರ ಜೀವನಾಡಿಯಾದ ವಚನ ತತ್ವ ದರ್ಶನವನ್ನು ನಿಮ್ಮ ಮುಂದಿಡಲು ಬಯಸುವೆ.
ಮನದಲ್ಲಿ ಕವಿದ ಅಂಧಕಾರವನ್ನು ದೂರಮಾಡಿ ಅಂಗ-ಲಿಂಗೋಧ್ಧಾರದ ಜೊತೆಗೆ ಜದತ್ತೋಧಾರಕ್ಕೆ ಕಾರಣವಾದ ವಚನಗಳ ಮಹತ್ವವನ್ನು ಎಷ್ಟು ವರ್ಣಿಸಿದರೂ ಸಾಲದು.
ಅಡಿಯಿಂದ ಮುಡಿಯವರೆಗಿರೂ ಅಸಂಖ್ಯ ಜೀವಕೋಶಗಳ ಜೀವ ಸತ್ವಪೂರ್ಣವಾಗಿಸಿಕೊಳ್ಳಲು ಮನಸ್ಸಿನ ಶುದ್ಧತೆಯನ್ನು ಕಾಯ್ದಿರಿಸಲು ವಚನಗಳು ಬಹಳ ಪರಿಣಾಮಕಾರಿಯಾಗಿವೆ. ೧೨ ನೇ ಶತಮಾನ ಎಂದಾಕ್ಷಣ ಪ್ರತಿಯೊಬ್ಬರ ಪ್ರತಿಯೊಬ್ಬ ಮಾನವನ ಹೃದಯಮಂದಿರದ   ಮಹಾ ಜ್ಞಾನಬಳ್ಳಿಯಲ್ಲಿ ವಚನಗಳೆಂಬ ಅಕ್ಷರಗಳು ಅಂಕುರಿಸುತ್ತವೆ. ನಂತರ ವಚನವೆಂಬ ಅಕ್ಷರಗಳು ಫಲನೀಡಿ ಒಂದೆರಡಕ್ಷರವಾದರೂ ವಚನ ಹಾಗೂ ವಚನ ಸಾಹಿತ್ಯದ ಕುರಿತು ಮಾತನಾಡುವ ರೀತಿ ಪ್ರೇರೇಪಿಸುತ್ತವೆ. ಇದೇ ಅಲ್ಲವೇ ವಚನಕಾರರ ಮಹತ್ವವನ್ನು ಹೆಚ್ಚಿಸುವ ಅಂಶ. ವಚನ ಒದಿದರೆ ಸಾಲದು, ಅದರ ಅರ್ಥವನ್ನು ತಿಳಿದರೂ ಸಾಲದು ನಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ.

ಅಂದು ಇಂದು ಮತ್ತೂಂದು ದಿನವೆನ್ನ ಬೇಡ, ದಿನವಿಂದೇ ಶ್ರೇಷ್ಠ. ನಂತರ ಆನಂತರ ಎಂದೆನಬೇಡ ಈ ಕ್ಷಣವೇ ಸರ್ವಶ್ರೇಷ್ಠ ಎಂದು ಭಾವಿಸಬೇಕೆಂಬ ಅಂಶ ಪ್ರತಿಯೊಬ್ಬರಲ್ಲೂ ಇರಬೇಕು. ವಚನ ಎಂಬು ಒಂದು ರೀತಿಯ ಮಹಾ ಜ್ಞಾನವೆಂದರೆ ತಪ್ಪಾಗಲಾರದು. ಅದು ಎಲ್ಲರಲ್ಲೂ ಜ್ಞಾನವೆಂಬ ಬೀಜವನ್ನು ಬಿತ್ತಿ ಬೆಳೆಸುತ್ತದೆ,
ವಚನವೆಂದಾಕ್ಷಣ 
▶ಮನವು ಪಂಜರದಲ್ಲಿದ್ದ ಪಕ್ಷಿಯು ಸ್ವತಂತ್ರವಾಗಿ ತಮ್ಮ  ಸಂತಸವನ್ನು ಅನುಭವಿಸುವ ಹಕ್ಕಿಯಂತಾಗುತ್ತದೆ.
▶ಬುದ್ದಿಮಾಂದ್ಯನಿಗೂ ತಿಳುವಳಿಕೆ ಲಭಿಸುತ್ತದೆ. ▶ಅಂಧಕಾರದಲ್ಲಿದ್ದವನೂ ಜ್ಞಾನವಂತನಾಗುತ್ತಾನೆ. 
▶ ಅಂಧಕನಿಗೂ ನೇತ್ರಗಳು ಧಾವಿಸಿದಂತೆ.
▶ ಲೋಪವೇ ಲೋಪವಾದಂತೆ.
▶ ಧರೆಯ ಉತ್ತರ ದಕ್ಷಿಣ ಫತ ಗೋಚರಿಸಿದಂತೆ.
▶ ಪಾಪಿಯೂ ಪುಣ್ಯವಂತನಾದಂತೆ.
▶ಪರಮ ಪಾತಕಗೈದವನೂ , ಪರಮಪಾವನನಾದಂತೆ.
▶ ವಿಷವುಂಡರೂ , ಅಮೃತವಾದಂತೆ.
▶ದಟ್ಟ ಅರಣ್ಯದಲ್ಲಿ ಕಳೆದುಹೋದ ಹಾದಿ, ಮತ್ತೆ ದೊರೆತಂತೆ
▶ಕಳೆದುಕೊಂಡ ವಸ್ತು ಮತ್ತೆ ದೊರೆತಂತೆ.
▶ಅಂತ್ಯವೂ ಆರಂಭವಾದಂತೆ.
▶ ಪಾಮರನೂ ಪಾವನನಾದಂತೆ
▶ಅಹಂಕಾರವುಳ್ಳವನು ಅಹಂಕಾರ ಕಳೆದುಕೊಂಡಂತೆ.
▶ದೃಷ್ಠಬುದ್ದಿಯವನು ದೃಷ್ಠಬುದ್ದಿ ಕಳೆದುಕೊಂಡಂತೆ.
▶ರೋಗಗ್ರಸ್ಥನೂ ರೋಗಮುಕ್ತಿಗೊಂಡಂತೆ.
▶ಅಸ್ವಸ್ಥನೂ ಸದೃಢನಾದಂತೆ.
▶ನಶ್ವರನು ಶಾಶ್ವತನಾದಂತೆ....
ಯಾರು ಯಾವ ವಿಚಾರದಲ್ಲಿ ಲೋಪವನ್ನೂಳಗೊಂಡಿರುತ್ತಾರೋ ಅವರು ವಚನವೆಂಬ ಮಹಾ ಮಂತ್ರದಿಂದ ಆಲೋಪವನ್ನೇ ಲೋಪವಾಗಿಸಿಕೊಳ್ಳುವುಗಂತೂ ಸತ್ಯವಾಗಿದೆ. ಈ ಅಂಶಕ್ಕೆ ಕಾರಣ ಹುಡುಕುತ್ತಾ ಹೋದರೆ. ನಮಗೆ 'ವಚನ ತತ್ವ ದರ್ಶನ'ವೇ ಲಭಿಸುವುದು.

ವಚನಗಳು ನಮ್ಮ ಭಾವನೆಗಳಿಗೆ ಬಹಳ ಸನೀಹವಾಗಿರುವಂತೆ ಕಾಣುತ್ತವೆ.  ಎಲ್ಲಾ ಶರಣ ಭಕ್ತಿ ಭಾವನೆಗಳನ್ನು ಕೂಡಿದ ಮಹಾ ಅಮೃತ ವಚನಗಳಾದುದರಿಂದ ಎಲ್ಲಾ ರೀತಿಯ ಮನೋಭಾವದವರಿಗೂ ವಚನಗಳು ನೆಚ್ಚಿನವಾಗಿರುತ್ತವೆ. ನಹೀ ಜ್ಞಾನೇನ ಸದೃಶಂ ಎಂಬ ನುಡಿಯಂತೆ ಶರಣರು ಎಲ್ಲಾ ಅರಿತಿದ್ದರೂ, ಅರಿತಿರುವೆನೆಂಬ ಅಹಂಕಾರವಿಲ್ಲದೆ ತ್ರಿವಿಧ ದಾಸೋಹ ಗೈದ ಮಹಾ ಮಹಿಮರು. ಶರಣರ ತ್ರಿವಿಧ ದಾಸೋಹವೆಂದರೆ ಜ್ಞಾನದಾಸೋಹ, ಭಕ್ತಿ ದಾಸೋಹ, ಅನ್ನ ದಾಸೋಹ. ಜ್ಞಾನದಾಸೋಹವನ್ನು ನಾವು ವಚನಕಾರರ ವಚನದಲ್ಲಿಯೇ ಕಾಣಬಹುದು.ಭಕ್ತಿ ದಾಸೋಹವನ್ನು ವಚನಕಾರರ ವಚನ ನುಡಿಗಳಲ್ಲೇ ಭಕ್ತಿಯ ಅಂಶವನ್ನು ಗುರುತಿಸಬಹುದು. ಹಾಗೇ ಅನ್ನ ದಾಸೋಹ, ಪ್ರತಿ ಶರಣರು ಅತಿಥಿ ಸತ್ಕಾರ ಪ್ರಿಯರು, ಸೋಹ ಎನ್ನದೆ ದಾಸೋಹ ಎನ್ನುವ ಉದಾತ್ತ ಮನೋಭಾವದವರು.  ಬೇಡಿ ಬಂದವರಿಗೆ ಬಾಗಿ ನೀಡುವ ಮನೋಧರ್ಮದವರು. ಹಾಗಾಗಿ ಶರಣರ ವಚನಗಳು ಜ್ಞಾನ, ಭಕ್ತಿ, ದಾಸೋಹದ ಪ್ರತೀಕವಾಗಿ ವಿಶ್ವ ಮನ್ನಣೆ ಪಡೆದಿವೆ....

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ