ಶನಿವಾರ, ಏಪ್ರಿಲ್ 23, 2022

ಶ್ರೀ ಅಭಿನವಕುಮಾರ ಚೆನ್ನಬಸವ ಮಹಾಸ್ವಾಮಿಗಳು ರಚಿಸಿರುವ ಕೃತಿಗಳ ಪರಿಚಯ



ಪರಮಪೂಜ್ಯ ಡಾ. 

ಶ್ರೀ ಅಭಿನವಕುಮಾರ ಚೆನ್ನಬಸವ ಮಹಾಸ್ವಾಮಿಗಳು

ರಚಿಸಿರುವ

ಬಸವ ದ್ವಿಪದಿ

ಪುಸ್ತಕ ಪ್ರತಿಗಳಿಗೆ ಈ ಕೆಳಗಿನ ಗೂಗಲ್‌ ಫಾರಂ ಭರ್ತಿ ಮಾಡಿ, ಕೆಳಗಿನ ನಂಬರ್‌ʼಗೆ ಸಂಪರ್ಕಿಸಿ.

ಕುಮಾರೇಶ್ವರ ಗ್ರಂಥಮಾಲೆ

ಓಲೇಮಠ,ಜಮಖಂಡಿ ಮತ್ತು ನವಿಲುತೀರ್ಥ,ಸವದತ್ತಿ

+91 9448636734


ಗೂಗಲ್‌ ಫಾರಂ

https://forms.gle/XB8b93kgeVuqrnDg6



ಸೋಮವಾರ, ಜೂನ್ 11, 2018

ಶಿವದುಂದುಭಿ


ಶಿವದುಂದುಭಿ 

ಮಾಸಪತ್ರಿಕೆ ಪಡೆಯಲು 
ಆಜೀವ ಸದಸ್ಯತ್ವ :- 2010 ರೂ.ಗಳು
ವಾರ್ಷಿಕ ಸದಸ್ಯತ್ವ :- 210 ರೂ.ಗಳು 
ಬಿಡಿ ಸಂಚಿಕೆಯ ಬೆಲೆ :- 16 ರೂ.ಗಳು







2018 APRIL SHIVADUNDUBHI CLICK BELOW



2018 MAY SHIVADUNDUBHI CLICK BELOW


ಜ್ಞಾನಾಮೃತ



Good Morning, Happy Tuesday
14th August 2018 @ Hiremath, Tumkur

ದೇಶಕ್ಕಾಗಿ ಸತ್ತವರು ಹುತಾತ್ಮರಾಗುತ್ತಾರೆ.
ಸ್ವಾರ್ಥಕ್ಕಾಗಿ ಸತ್ತವರು ಪ್ರೇತಾತ್ಮವಾಗುತ್ತಾರೆ” 
 - ಡಾ. ಶಿವಾನಂದ ಶಿವಾಚಾರ್ಯರು

 ಮಹಾರಾಷ್ಟ್ರದ ನಂದೂರ್‌ಬಾರ್‌ನಲ್ಲಿ ಉದ್ಯಮಿ + ವರ್ತಕ ಶ್ರೀಯುತ ಬಾಲಾಶಂಕರ್‌ರವರದು ಬಹುದೊಡ್ಡ ಹೆಸರು. ಅವರು ನಂದೂರ್‌ಬಾರ್ ಪಟ್ಟಣದ ಪ್ರಸಿದ್ಧ ವರ್ತಕರಲ್ಲೊಬ್ಬರು. ಅವರು ಅಡುಗೆ ಎಣ್ಣೆಯ (ಎಡಿಬಲ್ ಆಯಿಲ್) ವ್ಯಾಪಾರವನ್ನು ಮಾಡಿಕೊಂಡಿದ್ದರು. ಅವರದು ಅತ್ಯಂತ ಶ್ರೀಮಂತ ಕುಟುಂಬ. ಅವರಿಗೆ ಮಕ್ಕಳಿರಲಿಲ್ಲ. ಅವರು ಸಂತಾನಕ್ಕಾಗಿಯೇ ಎಂದು ಮತ್ತೊಂದು ಮದುವೆಯಾಗುತ್ತಾರೆ. ದ್ವಿತೀಯ ದಾಂಪತ್ಯದಲ್ಲಿ ಅವರಿಗೊಂದು ಹೆಣ್ಣುಮಗು ಹುಟ್ಟುತ್ತದೆ. ಮಗುವಿಗೆ ಸವಿತಾ ಎಂದು ನಾಮಕರಣ ಮಾಡುತ್ತಾರೆ. ಮಗಳು ಸವಿತಾಳನ್ನು ಅವರು ತುಂಬ ಪ್ರೀತಿ ಮತ್ತು ಕಕ್ಕುಲತೆಯಿಂದ ಬೆಳೆಸುತ್ತಾರೆ. ಮಗಳು ಪುಷ್ಪವತಿಯಾಗುತ್ತಿರುವ ಹಾಗೆಯೇ ಅವರು ಅವಳನ್ನು ಪುಷ್ಪೇಂದ್ರ ಎಂಬ ಯುವಕನಿಗೆ ಕೊಟ್ಟು ಮದುವೆ ಮಾಡುತ್ತಾರೆ.
ಸವಿತಾ ಮತ್ತು ಪುಷ್ಪೇಂದ್ರ ದಂಪತಿಗಳಿಗೆ 1926, ಡಿಸೆಂಬರ್ 26ರಂದು ಒಂದು ಗಂಡುಮಗು ಹುಟ್ಟುತ್ತದೆ. ಆ ಮಗುವಿಗೆ “ಶಿರೀಶ್‌ಕುಮಾರ್” ಎಂದು ನಾಮಕರಣ ಮಾಡುತ್ತಾರೆ.
 ಶ್ರೀಮಂತ ಮೆಹತಾ ಕುಟುಂಬದಲ್ಲಿ ಹುಟ್ಟಿದ ಶಿರೀಶ್‌ಕುಮಾರ್ ಹುಟ್ಟುದೇಶಭಕ್ತ. ಅದು 1926ರ ಕಾಲ. ದೇಶದ ತುಂಬೆಲ್ಲ ಸ್ವಾತಂತ್ರ್ಯ ಚಳುವಳಿ ಚುರುಕುಗೊಂಡಿತ್ತು. ಗಾಂಧೀಜಿಯವರು ಸ್ವಾತಂತ್ರ್ಯಾಂದೋಲನದ ಮುಂಚೂಣಿಯಲ್ಲಿದ್ದು ಇಡೀ ದೇಶವನ್ನು ಬ್ರಿಟಿಷರ ವಿರುದ್ಧ ಎಚ್ಚರಿಸಿಕೊಂಡಿದ್ದರು. 1926ರ ಆ ಕಾಲಘಟ್ಟದಲ್ಲಿ ಹುಟ್ಟಿದ ಪ್ರತಿಯೊಂದು ಮಗು ಸ್ವಾತಂತ್ರ್ಯ ಮಂತ್ರವನ್ನು ಜಪಿಸುತ್ತಲೇ ಹುಟ್ಟುತ್ತಿತ್ತು. ಇಡೀ ದೇಶದ ತುಂಬ ರಾಷ್ಟ್ರಪ್ರೇಮದ ಜೊತೆಯಲ್ಲಿ ಬ್ರಿಟಿಷರ ವಿರುದ್ಧ ಅಪರಿಮಿತ ಆಕ್ರೋಶ ತುಂಬಿಕೊಂಡಿತ್ತು.
 ಗಾಂಧೀಜಿಯವರು ೧೯೪೨ ಆಗಸ್ಟ್ ೯ರಂದು “ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ” (ಕ್ವಿಟ್ ಇಂಡಿಯಾ) ಎಂದು ಬ್ರಿಟಿಷ್ ಸರಕಾರಕ್ಕೆ ಕರೆಕೊಟ್ಟರು. ಬ್ರಿಟಿಷ್ ಸರಕಾರವು ಗಾಂಧೀಜಿಯವರ ಕರೆಗೆ ಸ್ಪಂದಿಸದೆ ಕೆಪ್ಪನಂತೆ ವರ್ತಿಸಿಕೊಂಡಿತ್ತು. ಗಾಂಧೀಜಿಯವರು ದೇಶಾದ್ಯಂತ “ಚಲೇ ಜಾವ್” ಚಳುವಳಿಯನ್ನು ಚುರುಕುಗೊಳಿಸಿದರು. ಗಾಂಧೀಜಿಯವರ ಕರೆಗೆ ಓಗೊಟ್ಟ ಇಡೀ ದೇಶ ಸ್ವಾತಂತ್ರ್ಯ ಹೋರಾಟವನ್ನು ತೀವ್ರಗೊಳಿಸಿಕೊಂಡಿತ್ತು.
ದಿನನಿತ್ಯದಲ್ಲೂ ಬ್ರಿಟಿಷ್ ಸರಕಾರದ ವಿರುದ್ಧ ಹಳ್ಳಿ, ಪಟ್ಟಣಗಳೆನ್ನದೆ ಅಲ್ಲಲ್ಲಿ ಪ್ರತಿಭಟನೆಗಳು ನಡೆದುಕೊಂಡಿದ್ದವು. ರಾಷ್ಟ್ರದಾದ್ಯಂತ ಜನಗಳು ವಯೋಭೇದ, ಲಿಂಗಭೇದ, ಜಾತಿಭೇದ, ನಡೆಭೇದ, ನುಡಿಭೇದವಿಲ್ಲದೆ ಚಳುವಳಿಯಲ್ಲಿ ಭಾಗವಹಿಸುತ್ತಲಿದ್ದರು. ಬರೀ ದೊಡ್ಡವರು ಮಾತ್ರವಲ್ಲ, ಯುವಕರು, ಮಕ್ಕಳು, ಹೆಣ್ಣುಮಕ್ಕಳು ಎಲ್ಲರೂ ಚಳುವಳಿಯಲ್ಲಿ ಭಾಗವಹಿಸಿಕೊಂಡಿದ್ದು ಚಳುವಳಿಯ ಒಂದು ಭಾಗವಾಗಿ ಗುರುತಿಸಿಕೊಂಡಿದ್ದರು.
  ಏಳು, ಎಂಟನೆಯ ತರಗತಿಯಲ್ಲಿ ಓದುತ್ತಿದ್ದ ಕಿಶೋರಾವಸ್ಥೆಯಲ್ಲಿರುವ ಶಾಲಾಮಕ್ಕಳು ಕೂಡ ಚಳುವಳಿಯಲ್ಲಿ ಭಾಗವಹಿಸುತ್ತಲಿದ್ದರು. ಅವರು ತಮ್ಮ ಪುಟ್ಟ ಪುಟ್ಟ ಕೈಗಳಲ್ಲಿ ಭಾರತದ ಧ್ವಜವನ್ನು ಹಿಡಿದುಕೊಂಡು “ಭಾರತ ಮಾತಾ ಕೀ ಜೈ” ಹೇಳುತ್ತ, “ವಂದೇ ಮಾತರಮ್” ಹೇಳುತ್ತ ಪ್ರತಿಭಟನಾ ಮೆರವಣಿಗೆಗಳ ಮುಂಚೂಣಿಯಲ್ಲಿರುತ್ತಿದ್ದರು. ಮಕ್ಕಳು ಎತ್ತರದ ಕಂಠದಲ್ಲಿ ಉತ್ಸಾಹದಿಂದ ಉದ್ಘೋಷವಾಕ್ಯಗಳನ್ನು ಕೂಗುತ್ತಲಿದ್ದರು.
 ಶಿರೀಶ್‌ಕುಮಾರ್ ಮೆಹತಾ ಎಂಟನೆಯ ತರಗತಿಯಲ್ಲಿ ಓದುತ್ತಿದ್ದ. ಆತನಿಗೆ ಗಾಂಧೀಜಿ ಮತ್ತು ನೇತಾಜಿ ಸುಭಾಶಚಂದ್ರ ಬೋಸ್ ಎಂದರೆ ತುಂಬಾನೇ ಇಷ್ಟ. ಅವರನ್ನು ಆತ ಆದರ್ಶವಾಗಿ ಸ್ವೀಕರಿಸಿದ್ದ. ಶಿರೀಷ್‌ಕುಮಾರ್ ವಯಸ್ಸಿನಿಂದ ಕಿರಿಯನಾಗಿದ್ದರೂ ದೇಶಭಕ್ತಿಯಲ್ಲಿ ಮಾತ್ರ ಆತ ಹಿರಿತನದ ಭಂಡಾರದಂತಿದ್ದ.
 ಅವತ್ತು 1942, ಸೆಪ್ಟೆಂಬರ್ 9. ಅವತ್ತಿಗೆ ಗಾಂಧೀಜಿಯವರು “ಕ್ವಿಟ್ ಇಂಡಿಯಾ” ಚಳುವಳಿಗೆ ಕರೆಕೊಟ್ಟು ಸರಿಯಾಗಿ ಒಂದು ತಿಂಗಳಾಗಿತ್ತು. ಸೆಪ್ಟಂಬರ್ ೯ರಂದು ನಂದೂರ್‌ಬಾರ್‌ನಲ್ಲಿ ಸ್ವಾತಂತ್ರ್ಯ ಹೋರಾಟಗಾರರು ಬೆಳಿಗ್ಗೆ ಬೆಳಿಗ್ಗೇನೇ ಪ್ರತಿಭಟನಾ ಮೆರವಣಿಗೆಯನ್ನು ಏರ್ಪಡಿಸಿದ್ದರು. ಮೆರವಣಿಗೆಯಲ್ಲಿ ಸಹಸ್ರ, ಸಹಸ್ರ ಜನಗಳು ಸೇರಿದ್ದರು. ಎಲ್ಲರೂ ಒಕ್ಕೊರಲಿನಿಂದ ಬ್ರಿಟಿಷ್ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು. ಮೆರವಣಿಗೆಯಲ್ಲಿ ಶಾಲಾಮಕ್ಕಳು ಕೂಡ ಭಾಗವಹಿಸಿದ್ದರು.
ಮೆರವಣಿಗೆಯನ್ನು ವಿಫಲಗೊಳಿಸುವಂತೆ ಮತ್ತು ಚಳುವಳಿಯ ತೀವ್ರತೆ ಹೆಚ್ಚದಂತೆ ನೋಡಿಕೊಳ್ಳುವ ಬಹುದೊಡ್ಡ ಜವಾಬ್ದಾರಿ ಪೋಲಿಸ್ ಅಧಿಕಾರಿಗಳ ಮೇಲಿತ್ತು. ಅವತ್ತು ಪೋಲಿಸ್ ಅಧಿಕಾರಿಗಳ ನಿರೀಕ್ಷೆ ಮೀರಿ ಜನಗಳು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಎಲ್ಲಿ ನೋಡಿದರೂ ಜನವೋ ಜನ!!
ಕಣ್ಣು ಹಾಯಿಸಿದಷ್ಟು ದೂರದಲ್ಲೆಲ್ಲ ಬರೀ ಜನಗಳು ಮತ್ತು ಭಾರತದ ರಾಷ್ಟ್ರಧ್ವಜಗಳು ಕಾಣಿಸುತ್ತಿದ್ದವು.
 ಎಂಟನೆಯ ತರಗತಿಯಲ್ಲಿ ಓದುತ್ತಿದ್ದ ಶಿರೀಶ್‌ಕುಮಾರ್ ಮೆಹತಾ ಕೂಡ ಕೈಯಲ್ಲಿ ರಾಷ್ಟ್ರಧ್ವಜವನ್ನು ಹಿಡಿದುಕೊಂಡು ಮೆರವಣಿಗೆಯ ಮುಂಚೂಣಿಯಲ್ಲಿ ನಡೆದುಕೊಂಡು ಬರುತ್ತಿದ್ದ. ಮೆರವಣಿಗೆ ನಗರದ ಮಧ್ಯಭಾಗದಲ್ಲಿ ಹಾದುಹೋಗುತ್ತಿತ್ತು. ಶಿರೀಶ್‌ಕುಮಾರ್ ಮತ್ತು ಆತನ ಕೆಲವು ಪರಮಾಪ್ತ “ಸಮಾನವಯಸ್ಕ” ಮತ್ತು “ಸಮಾನಮನಸ್ಕ” ಸ್ನೇಹಿತರು “ವಂದೇ ಮಾತರಮ್” ಮತ್ತು “ಭಾರತ ಮಾತಾ ಕೀ ಜೈ” ಎಂಬ ಉದ್ಘೋಷಣೆಗಳನ್ನು ಕೂಗಿಕೊಂಡು ಉತ್ಸಾಹದಿಂದ ಮೆರವಣಿಗೆಯ ಜೊತೆಯಲ್ಲಿ ಹೆಜ್ಜೆಹಾಕುತ್ತಿದ್ದರು. ಮೆರವಣಿಗೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರೂ ಜೋಶ್‌ನಲ್ಲಿದ್ದರು.
 ಶಿರೀಶ್‌ಕುಮಾರನ ಮಾತೃಭಾಷೆ ಗುಜರಾತಿ. ಆತ ಗುಜರಾತಿ ಭಾಷೆಯಲ್ಲಿ ಜಯಘೋಷವನ್ನು ಹೇಳುತ್ತಲಿದ್ದ.
ಜಯಘೋಷದ ಜೊತೆ ಜೊತೆಯಲ್ಲಿ “ನಾವು ಭಾರತದ ಧ್ವಜವು ತಲೆತಗ್ಗಿಸದಂತೆ ನೋಡಿಕೊಳ್ಳುತ್ತೇವೆ. ನಮ್ಮ ದೇಶದ ಧ್ವಜ ಯಾವಾಗಲೂ ಆಕಾಶವನ್ನು ನೋಡಿಕೊಂಡು ಊರ್ಧ್ವಮುಖಿಯಾಗಿ ಹಾರಾಡುತ್ತಿರಬೇಕು. ನಾವು ಯಾವುದೇ ಕಾರಣಕ್ಕೂ ನಮ್ಮ ರಾಷ್ಟ್ರಧ್ವಜದ ತಲೆ ಕೆಳಗಾಗುವಂತೆ ಮಾಡುವುದಿಲ್ಲ. ನಮ್ಮ ಧ್ವಜದ ತಲೆ ಯಾವತ್ತೂ ತಗ್ಗುವುದಿಲ್ಲ. ಅದು ಬಗ್ಗುವುದಿಲ್ಲ” ಎಂದು ಕೂಗಿ ಕೂಗಿ ಹೇಳುತ್ತಲಿದ್ದ.
 ಬೃಹತ್ ಮೆರವಣಿಗೆಯದು ಪಟ್ಟಣದ ಮಧ್ಯಭಾಗಕ್ಕೆ ಬರುತ್ತಲೇ ಪೋಲಿಸರು ಮೆರವಣಿಗೆಯನ್ನು ತಡೆಯುತ್ತಾರೆ. ಪೋಲಿಸ್‌ರು ಜನರಿಗೆ ಮೆರವಣಿಗೆಯನ್ನು ವಿಸರ್ಜನೆಮಾಡಿ ಮನೆಗೆ ಹೋಗಲು ಹೇಳುತ್ತಾರೆ.
ಇಲ್ಲದೆ ಹೋದರೆ “ಫೈರಿಂಗ್” ಮಾಡಬೇಕಾಗುತ್ತದೆ ಎಂದು ಹೆದರಿಸುತ್ತಾರೆ.  ಮೇಲಧಿಕಾರಿಗಳು “ಶೂಟ್ ಅಟ್ ಸೈಟ್” ಎಂದು ಆದೇಶ (ಆರ್ಡರ್) ಮಾಡಿದ್ದಾರೆ. ಮೆರವಣಿಗೆಯನ್ನು ನಿಲ್ಲಿಸದೆ ಹೋದರೆ ಗುಂಡು ಹಾರಿಸ- ಬೇಕಾಗುತ್ತದೆ ಎಂದು ಪೋಲಿಸರು ಜನಗಳನ್ನು ಎಚ್ಚರಿಸುತ್ತಾರೆ. ಜನರು ಪೋಲಿಸ್‌ರ ಆಗ್ರಹ, ಆದೇಶವನ್ನು ಧಿಃಕ್ಕರಿಸಿ ಮುಂದೆ ಮುಂದೆ ಸಾಗುತ್ತಾರೆ. ಮೆರವಣಿಗೆಯ ಮುಂಚೂಣಿಯಲ್ಲಿದ್ದ ಮಕ್ಕಳು ಕೂಡ ಮನವಿಗೆ ಕಿವಿಕೊಡುವುದಿಲ್ಲ. ಪೋಲಿಸರ ಆದೇಶವನ್ನು ಧಿಕ್ಕರಿಸಿ ಮಕ್ಕಳು ಘೋಷಣೆಗಳನ್ನು ಕೂಗುತ್ತಲೇ ಇರುತ್ತಾರೆ.
 ತಾಳ್ಮೆ ಕಳೆದುಕೊಂಡ ಪೋಲಿಸರು ಜನಗಳ ಮೇಲೆ ಗುಂಡುಹಾರಿಸತೊಡಗುತ್ತಾರೆ. ಓರ್ವ ಪೋಲಿಸ್ ಅಧಿಕಾರಿ ಮೆರವಣಿಗೆಯಲ್ಲಿ ಪಾಲ್ಗೊಂಡ ಹೆಣ್ಣು ಹುಡುಗಿಯರ ಮೇಲೆ ಗುಂಡುಹಾರಿಸಲು ಅವರತ್ತ ಬಂದೂಕಿನ ಗುರಿ ಇಡುತ್ತಾನೆ. ಇದನ್ನು ಗಮನಿಸಿದ ಕುವರ ಶಿರೀಶ್‌ಕುಮಾರ್ ಧಾವಿಸಿ ಮುಂದೆ ಬರುತ್ತಾನೆ. ಆತ ಪೋಲಿಸ್‌ನ ಗುಂಡಿಗೆ ಎದೆಯೊಡ್ಡಿ ನಿಂತು, “ನಿನಗೆ ಗುಂಡು ಹಾರಿಸಲೇಬೇಕೆಂದರೆ ಮೊದಲು ನನ್ನ ಮೇಲೆ ಗುಂಡು ಹಾರಿಸು” ಎಂದು ಧೈರ್ಯದಿಂದ ಹೇಳುತ್ತಾನೆ. ಅದರ ಹಿಂದೆಯೇ ಭಾರತದ ಧ್ವಜವನ್ನು ಎತ್ತಿಹಿಡಿದು “ಭಾರತ ಮಾತಾ ಕೀ ಜೈ, ವಂದೇ ಮಾತರಮ್” ಹೇಳುತ್ತಾನೆ.
ಕಿಶೋರನ ದಿಟ್ಟ ವರ್ತನೆಯಿಂದ ರೋಸಿಹೋದ ಪೋಲಿಸ್ ಮನಸ್ಸಿನ ಮೇಲಿನ ನಿಯಂತ್ರಣವನ್ನು ಕಳೆದುಕೊಂಡು ಶಿರೀಶ್‌ಕುಮಾರನ ಎದೆಗೆ ಮೂರು ಗುಂಡುಗಳನ್ನು ಹಾರಿಸುತ್ತಾನೆ. ಮೂರು ಗುಂಡುಗಳು ಆ ಪುಟ್ಟ ಎದೆಯನ್ನು ಪ್ರವೇಶಿಸುತ್ತಲೇ “ವಂದೇ ಮಾತರಮ್” ಹೇಳುತ್ತ ಶಿರೀಶ್‌ಕುಮಾರ್ ಅಲ್ಲಿಯೇ ಕುಸಿದುಬೀಳುತ್ತಾನೆ. ಆತ ಕುಸಿದು ಬಿದ್ದರೂ ಆತನ ಕೈಯಲ್ಲಿರುವ ಭಾರತದ ರಾಷ್ಟ್ರಧ್ವಜ ಮಾತ್ರ ಆಕಾಶವನ್ನು ನೋಡಿಕೊಂಡಿರುತ್ತದೆ. ದೇಶಕ್ಕಾಗಿ ಕಿಶೋರ ಶಿರೀಷಕುಮಾರನ ಬಲಿದಾನವಾಗುತ್ತದೆ.
 ಇನ್ನೂ ಹದಿಹರೆಯದ ಹೊಸ್ತಿಲಲ್ಲಿದ್ದ ಮೆಹತಾ ಕುಟುಂಬದ ಕುಡಿ ರಾಷ್ಟಕ್ಕಾಗಿ ಬಲಿಯಾಗುತ್ತದೆ.  ಶಿರೀಶ್‌ಕುಮಾರ್ ಚಿಕ್ಕ ವಯಸ್ಸಿನಲ್ಲಿಯೇ ದೇಶಕ್ಕಾಗಿ ಹುತಾತ್ಮನಾಗುತ್ತಾನೆ. ಶಿರೀಶ್‌ಕುಮಾರನ ಜೊತೆಯಲ್ಲಿ ಅವತ್ತು ಆತನ ನಾಲ್ಕು ಜನ ಸ್ನೇಹಿತರು ಕೂಡ ಹುತಾತ್ಮರಾಗುತ್ತಾರೆ. ಲಾಲ್‌ದಾಸ್ ಶಹ್, ಧನಸುಖಲಾಲ್ ವಾನಿ, ಶಶಿಧರ್ ಕೇಟ್ಕರ್ ಮತ್ತು ಘನಶ್ಯಾಮದಾಸ್ ಶಹ್..., ಇವರೂ ಕೂಡ ಅವತ್ತಿನ ಪೋಲಿಸ್ ಫೈರಿಂಗ್‌ನಲ್ಲಿ ಅಸುನೀಗುತ್ತಾರೆ. ಅವರ ಬಲಿದಾನವು “ರಾಷ್ಟ್ರಾರ್ಪಣಮಸ್ತು” ಎಂದು ಹೇಳುತ್ತ ಇತಿಹಾಸದ ಪುಟಗಳಲ್ಲಿ ಚಿರಂಜೀವಿಯಾಗುತ್ತದೆ.
ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಆ ಮಹಾಚೇತನಗಳನ್ನು ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ ನೆನೆದು ಅವರಿಗೊಂದು ಕೃತಜ್ಞತಾಪೂರ್ವಕ “ರಾಷ್ಟ್ರೀಯ ನಮನ” (ನ್ಯಾಶನಲ್ ಸೆಲ್ಯೂಟ್) ಸಲ್ಲಿಸುವುದು ನಮ್ಮೆಲ್ಲರ ಕರ್ತವ್ಯ.

ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತುಮಕೂರು




......




Good Evening
10th August 2018 @ Hiremath, Tumkur

“ಶಿವ, ಪಾರ್ವತಿಯರು ಜಗತ್ತಿನ ತಂದೆ, ತಾಯಿ”
ಅದು ಹೇಗೆ  ಮತ್ತು ಅದು ಏಕೆ ಗೊತ್ತಾ?

ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತುಮಕೂರು

 ಶಿವನನ್ನು ಒಲಿಸಿಕೊಳ್ಳಲು ಪಾರ್ವತಿ ಸುದೀರ್ಘವಾದ 
ತಪಸ್ಸನ್ನು ಮಾಡುತ್ತಾಳೆ. ಪಾರ್ವತಿಯ ತಪಸ್ಸಿನ ತೀವ್ರತೆಯನ್ನು
ಕಂಡು ಸಚರಾಚರ ಪ್ರಕೃತಿಯೇ ಬೆರಗಾಗುತ್ತದೆ. 
ದಾಕ್ಷಾಯಿಣಿಯ ಸಾವಿನ ನಂತರ ಮಾನಸಿಕವಾಗಿ 
ಕಲ್ಲಾಗಿ ಹೋಗಿದ್ದ ಶಿವನು ಪಾರ್ವತಿಯ ತಪಸ್ಸಿಗೆ 
ಕೊನೆಗೂ ಕರಗಿಬಿಟ್ಟು ಪಾರ್ವತಿಗೆ ಒಲಿಯುತ್ತಾನೆ. 
ಶಿವ ಪಾರ್ವತಿಯನ್ನು ವರಿಸುವುದಕೆ, ಮತ್ತವಳನ್ನು 
ಮದುವೆಯಾಗುವುದಕ್ಕೆ ಒಪ್ಪಿಕೊಳ್ಳುತ್ತಾನೆ.  

ಪಾರ್ವತಿ ತನ್ನ ಮನದಾಶೆ ನೆರವೇರಿದ 
ಸಂತೋಷದಲ್ಲಿ ಅರಮನೆಗೆ ಬರುತ್ತಿರುತ್ತಾಳೆ. 
ಮಾರ್ಗಮಧ್ಯದಲ್ಲಿ ಅವಳಿಗೆ ಪುಟ್ಟ ಬಾಲಕನೊಬ್ಬನ 
ಹೃದಯವಿದ್ರಾವಕ ಆಕ್ರಂದನ ಕೇಳಿಸುತ್ತದೆ. 
ಪಾರ್ವತಿ ಧ್ವನಿ ಬಂದ ದಿಕ್ಕಿನತ್ತ ಹೋಗಿ ನೋಡುತ್ತಾಳೆ. 
ವಿಶಾಲವಾದ ಸರೋವರವೊಂದರ ಪಕ್ಕದಲ್ಲಿ 
ಆಟವಾಡಿಕೊಂಡಿದ್ದ ಬಾಲಕನೊಬ್ಬನನ್ನು 
ಮೊಸಳೆಯೊಂದು ಕಚ್ಚಿಹಿಡಿದುಕೊಂಡಿದೆ. 
ಅದು ಬಾಲಕನನ್ನು ತಿನ್ನಲು ಹವಣಿಸಿಕೊಂಡಿದೆ. 

ಬಾಲಕ ಪ್ರಾಣಭಯದಿಂದ ಕಿರುಚಿಕೊಳ್ಳುತ್ತ,
“ನನ್ನನ್ನು ಕಾಪಾಡಿ, ನನ್ನನ್ನು ಕಾಪಾಡಿ. 
ಅಯ್ಯೋ, ಇಷ್ಟೊಂದು ದೊಡ್ಡ ಪ್ರಪಂಚದಲ್ಲಿ 
ನನ್ನನ್ನು ಕಾಪಾಡುವವರು ಯಾರೂ ಇಲ್ಲವೇ? 
ಈ ಜಗತ್ತಿನಲ್ಲಿ ನನಗೆ ರಕ್ಷಣೆ ಕೊಡುವವರೇ ಇಲ್ಲವೇ? 
ನನಗೆ ಅಪ್ಪ, ಅಮ್ಮ, ಬಂಧು, ಬಳಗ, ನನ್ನವರು, ತನ್ನವರು 
ಎಂಬುವವರು ಯಾರೂ ಇಲ್ಲವಲ್ಲ?!! ಹಾಗೆಂದ ಮಾತ್ರಕ್ಕೆ 
ನನಗೆ ಬದುಕುವುದಕ್ಕೆ ಹಕ್ಕಿಲ್ಲವೇ? ಅಯ್ಯೋ ಶಿವನೇ, 
ನನ್ನನ್ನು ಬದುಕಿಸುವವರು ಯಾರೂ ಇಲ್ಲವೇ?” 
ಎಂದು ಅಲವತ್ತುಕೊಳ್ಳುತ್ತಿದ್ದಾನೆ. 

ಬಾಲಕನ ಕರುಣಕ್ರಂದನವನ್ನು ಕೇಳಿ 
ಪಾರ್ವತಿಯ ಮೃದುಜೀವ ಕರಗುತ್ತದೆ. 
ಅವಳು ಮೊಸಳೆಯ ಬಳಿ ಹೋಗಿ ವಿನಂತಿಸಿಕೊಳ್ಳುತ್ತಾಳೆ, 
“ಮಕರದೇವತೆಯೇ ಈ ಬಾಲಕನನ್ನು ಬಿಟ್ಟುಬಿಡು. 
ಈತ ಇನ್ನೂ ಹಸುಳೆ” ಎಂದು. 

ಮೊಸಳೆ ಹೇಳುತ್ತದೆ, 
“ಈತ ಹಸುಳೆಯಾದರೆ ನಾನು ಮೊಸಳೆ. 
ಈತನನ್ನು ನಾನೇಕೆ ಬಿಡಬೇಕು? 
ಈತ ನನ್ನ ಆಹಾರ. ನನ್ನ ಹತ್ತಿರಕ್ಕೆ ಬಂದ 
ಯಾರನ್ನಾದರೂ ಸರಿ, ನಾನು ಆಹಾರವಾಗಿ 
ಸ್ವೀಕರಿಸಬಹುದು ಎಂದು ದೇವರು ನನಗೆ 
ಆದೇಶವಿತ್ತಿದ್ದಾನೆ. ದೇವರ ಅಪ್ಪಣೆಯಾಗಿದೆ. 
ಆ ದೇವರೇ ಆಹಾರವಾಗಿ ಈ ಬಾಲಕನನ್ನು 
ನನ್ನ ಬಳಿ ಕಳುಹಿಸಿದ್ದಾನೆ. ಈತನನ್ನು ತಿಂದು 
ನಾನು ನನ್ನ ಹಸಿವೆಯನ್ನು ನೀಗಿಸಿಕೊಳ್ಳುತ್ತೇನೆ” ಎಂದು.

ಪಾರ್ವತಿ ಹೇಳುತ್ತಾಳೆ, 
“ಹೇ, ಮಕರದೇವತೆಯೇ ಈ ಬಾಲಕನನ್ನು 
ಬಿಟ್ಟುಬಿಡು. ಅದಕ್ಕೆ ಪ್ರತಿಯಾಗಿ ನೀನು ನನ್ನಲ್ಲಿ 
ಏನನ್ನಾದರೂ ಕೇಳು, ನಾನು ನಿನಗೆ ಕೊಡುವೆ. 
ಬಾಲಕನಿಗೆ ಜೀವದಾನ ಮಾಡು” ಎಂದು.

ಮೊಸಳೆ ಹೇಳುತ್ತದೆ, 
“ಕೇಳಿದ್ದನ್ನು ಕೊಡುವೆಯಾ? ಹಾಗಾದರೆ ನೀನು 
ಶಿವನನ್ನು ಒಲಿಸಿಕೊಳ್ಳುವುದಕ್ಕಾಗಿ ಮಾಡಿದ 
ಸುದೀರ್ಘ ಕಾಲದವರೆಗೆ ಮಾಡಿ ತಪಸ್ಸನ್ನೆಲ್ಲ 
ನನಗೆ ಧಾರೆ ಎರೆದುಬಿಡು. ನಿನ್ನ ತಪಸ್ಸಿನ ಫಲವನ್ನೆಲ್ಲ 
ನನ್ನ ಖಾತೆಗೆ (ಅಕೌಂಟ್‌ಗೆ) ವರ್ಗಾಯಿಸಿದರೆ ಮಾತ್ರ 
ನಾನು ಬಾಲಕನನ್ನು ಬಿಟ್ಟುಕೊಡುವೆ” ಎಂದು. 

ಪಾರ್ವತಿ ತಕ್ಷಣ ಹೇಳುತ್ತಾಳೆ, 
“ತುಂಬ ಸಂತೋಷ. ನಾನು ಶಿವನನ್ನು 
ಒಲಿಸಿಕೊಳ್ಳುವುದಕ್ಕಾಗಿ ಮಾಡಿದ ತಪಸ್ಸನ್ನೆಲ್ಲ 
ನಿನಗೆ ಸಂತೋಷದಿಂದ ಧಾರೆ ಎರೆಯುತ್ತೇನೆ. 
ಬರೀ ಈ ಒಂದು ಜನ್ಮದ ತಪಸ್ಸನ್ನು ಮಾತ್ರವಲ್ಲ, 
ನನ್ನ ಜನ್ಮಜನ್ಮಾಂತರದ ತಪಸ್ಸನ್ನೆಲ್ಲ 
ನಿನಗೆ ಧಾರೆ ಎರೆದುಕೊಡುತ್ತೇನೆ. 
ದಯವಿಟ್ಟು ಬಾಲಕನನ್ನು ಮಾತ್ರ ಬಿಟ್ಟುಬಿಡು” ಎಂದು.

ಮೊಸಳೆ ಪಾರ್ವತಿಗೆ ಹೇಳುತ್ತದೆ,
 “ದೇವಿ ಪಾರ್ವತಿ, ಭಾವಾವೇಶದಲ್ಲಿ ಹಾಗೆಂದು 
ಹೇಳಬೇಡ. ಇನ್ನೊಮ್ಮೆ, ಮತ್ತೊಮ್ಮೆ ಯೋಚಿಸಿ 
ನೋಡು. ಏಕೆಂದರೆ ಆವೇಶ, ಭಾವಾವೇಶದಲ್ಲಿ 
ನಿರ್ಧಾರವನ್ನು ತೆಗೆದುಕೊಳ್ಳುವುದು ಸರಿಯಲ್ಲ” ಎಂದು.

ಪಾರ್ವತಿ ಹೇಳುತ್ತಾಳೆ, 
“ಮಕರದೇವತೆ, ನನ್ನ ನಿರ್ಧಾರ ಗಟ್ಟಿಯಾಗಿದೆ. 
ಅದು ಅಚಲದಂತೆ ಅಚಲ!!
ನಾನು ತುಂಬ ಯೋಚಿಸಿಯೇ ನಿರ್ಧಾರ 
ಮಾಡಿದ್ದೇನೆ. ಚಿಂತೆ ಇಲ್ಲ. ನನ್ನ ತಪಸ್ಸನ್ನು 
ನಿನಗೆ ಧಾರೆ ಎರೆಯುತ್ತಿದ್ದೇನೆ. ಬಾಲಕನನ್ನು ಬಿಟ್ಟುಬಿಡು” ಎಂದು.

ಪಾರ್ವತಿ ತಪಸ್ಸನ್ನು ಧಾರೆ ಎರೆಯುತ್ತಾಳೆ. 
ಪಾರ್ವತಿಯ ತಪಸ್ಸಿನ ಫಲ ಮೊಸಳೆಯನ್ನು 
ಸೇರಿಕೊಳ್ಳುತ್ತದೆ. ಪಾರ್ವತಿಯ ತಪಸ್ಸಿನ 
ಪುಣ್ಯವದು ಮೊಸಳೆಯನ್ನು ಸೇರಿಕೊಳ್ಳುತ್ತಲೇ 
ಮೊಸಳೆಯ ಶರೀರವದು ಕೋಟಿ ಕೋಟಿ 
ಸೂರ್ಯರಂತೆ ಪ್ರಖರವಾಗಿ ಬೆಳಗತೊಡಗುತ್ತದೆ. 
ಅದರ ಮೈಬಣ್ಣ ಹೊಂಬಣ್ಣವಾಗಿ ಮಾರ್ಪಾಟುಗೊಳ್ಳುತ್ತದೆ. 
ಅದು ದಿವ್ಯತೇಜದಿಂದ ಬೆಳಗತೊಡಗುತ್ತದೆ. 

ಮೊಸಳೆಯದು ಬಾಲಕನನ್ನು ಬಿಟ್ಟುಕೊಡುತ್ತದೆ.

ಮೊಸಳೆ ಪಾರ್ವತಿಗೆ ಹೇಳುತ್ತದೆ, 
“ದೇವಿ ಪಾರ್ವತಿ, ನಿನ್ನ ತಪಸ್ಸಿನ ಘನತೇಜದಿಂದಾಗಿ 
ನನ್ನ ಶರೀರವಿದು ಇಷ್ಟೊಂದು ಕಾಂತಿಯುತವಾಯಿತು. 
ನಿನ್ನ ತಪಸ್ಸಿನ ತೇಜವದು ಅನುಪಮ ಮತ್ತು ಅನವದ್ಯ. 
ಓರ್ವ ಬಾಲಕನನ್ನು ಕಾಪಾಡುವುದಕ್ಕಾಗಿ ಅಷ್ಟೊಂದು 
ದೀರ್ಘಕಾಲದವರೆಗೆ ಮಾಡಿದ ಕಠಿಣವಾದ ತಪಸ್ಸಿನ 
ಫಲವನ್ನು ನನಗೆ ಧಾರೆ ಎರೆದೆಯಲ್ಲ? ಇದು ಉಚಿತವೇ? 
ನಿನ್ನ ತಪಸ್ಸನ್ನು ತ್ಯಾಗಮಾಡಿದೆಯಲ್ಲ, ಇದು ಸರಿಯೇ?” ಎಂದು.

ಪಾರ್ವತಿ ಹೇಳುತ್ತಾಳೆ,
 “ಓ ಮಕರದೇವತೆಯೇ, ನಾನೇನೋ ಇನ್ನೊಮ್ಮೆ, 
ಮತ್ತೊಮ್ಮೆ ಮತ್ತೆ ತಪಸ್ಸನ್ನು ಮಾಡಬಲ್ಲೆ. 
ಆದರೆ ಒಮ್ಮೆ ಹೋದ ಬಾಲಕನ ಪ್ರಾಣ ಮತ್ತೆ 
ಮರಳಿಬರುತ್ತದೆಯೇ? 
ನನ್ನ ಖಾತೆಯಲ್ಲಿ ನನ್ನ ತಪಸ್ಸು ಶೂನ್ಯಮೊತ್ತಕ್ಕೆ 
ಇಳಿದುಹೋಗಿ ನಾನದರ ಫಲಾನುಭವಿಯಾಗದಿದ್ದರೂ 
ಚಿಂತೆ ಇಲ್ಲ. ಆದರೆ ನನ್ನ ತಪಸ್ಸಿನ ಧಾರೆ 
ಎರೆಯುವಿಕೆಯಿಂದ ಈ ಬಾಲಕನ ಪ್ರಾಣ ಉಳಿಯಿತಲ್ಲ, 
ಅದು ನನಗೆ ಮುಖ್ಯ” ಎಂದಳು. 

ಪಾರ್ವತಿ ಹೀಗೆ ಹೇಳುತ್ತಿರುವ ಹಾಗೆಯೇ 
ಮೊಸಳೆ ಮತ್ತು ಬಾಲಕ ಅಲ್ಲಿಂದ ಅದೃಶ್ಯವಾಗುತ್ತಾರೆ. 

ಪಾರ್ವತಿಯು ಶಿವನನ್ನು ವರಿಸುವ ಹಟದಿಂದ 
ಮತ್ತೆ ತಪಸ್ಸಿಗೆ ಕುಳಿತುಕೊಳ್ಳುತ್ತಾಳೆ. 
ಇನ್ನೇನು ಪಾರ್ವತಿ ತಪಸ್ಸನ್ನು  ಶುರುಮಾಡಿ 
ತಪಸ್ಸಿಗೆ “ಓಂಪ್ರಥಮ” ಹೇಳಬೇಕೆನ್ನುವಷ್ಟರಲ್ಲಿ 
ಶಿವ ಅವಳೆದುರಿನಲ್ಲಿ ಪ್ರತ್ಯಕ್ಷನಾಗುತ್ತಾನೆ.

ಶಿವ ಪಾರ್ವತಿಯನ್ನು ಅದೊಮ್ಮೆ ತುಂಬು 
ಅನುರಾಗ ಮತ್ತು ಅಭಿಮಾನದ ಕಣ್ಣುಗಳಿಂದ ನೋಡುತ್ತ, 
“ಪಾರ್ವತಿ, ನೀನು ಮತ್ತೆ ನನಗಾಗಿ ಮತ್ತು ನನ್ನನ್ನು 
ವರಿಸುವುದಕ್ಕಾಗಿ ತಪಸ್ಸನ್ನು ಮಾಡುವ ಅವಶ್ಯಕತೆ, 
ಅಗತ್ಯ ಇಲ್ಲ. ನಿನ್ನಲ್ಲಿರುವ ಜೀವದಯೆ ಮತ್ತು ಅಂತಃಕರಣ 
ಯಾವ ತಪಸ್ಸಿಗೂ ಕಡಿಮೆ ಏನಿಲ್ಲ. 

ನನ್ನ ದೃಷ್ಟಿಯಲ್ಲಿ, ಜೀವದಯೆಗಿಂತ ದೊಡ್ಡ ತಪಸ್ಸು ಇನ್ನೊಂದಿಲ್ಲ. 
ನನ್ನ ಮನಸ್ಸನ್ನು ಅರಿತುಕೊಂಡೇ ಜ್ಞಾನಿಗಳು 
“ದಯವೇ ಧರ್ಮದ ಮೂಲವಯ್ಯ” ಎಂದು ವಕಾಲತ್ತು 
ಮಾಡಿದರು. ಜೀವಸಂಕುಲದ ಬಗ್ಗೆ ನಿನಗಿರುವ ಕಾಳಜಿ 
ಮತ್ತು ದಯೆಯನ್ನು ಪರೀಕ್ಷಿಸಲೋಸುಗ 
ನಾನೊಂದು ಪುಟ್ಟ ಮಾಯೆಯನ್ನು ರಚಿಸಿದ್ದೆ. 

ಮೊಸಳೆಯಾಗಿದ್ದವನು ನಾನೇ; ಬಾಲಕನೂ ನಾನೇ. 
ಈ ಪ್ರಪಂಚದಲ್ಲಿ ಎಲ್ಲವೂ ನಾನೇ ಮತ್ತು ಎಲ್ಲೆಲ್ಲೂ ನಾನೇ. 
ಪಾರ್ವತಿ, ಜೀವಜಗತ್ತಿನೊಂದಿಗೆ ನಿನಗಿರುವ 
ಭಾವನಾತ್ಮಕ ಕಾಳಜಿ ನನಗಿಷ್ಟವಾಯಿತು. 
ನನ್ನ ಪರೀಕ್ಷೆಯಲ್ಲಿ ನೀನು ಗೆದ್ದಿರುವೆ. 
ನೀನೇ ನನಗೆ ತಕ್ಕ ಸತಿ. ನಾನು 
ನಿನ್ನನ್ನು ವರಿಸಿದ್ದೇನೆ” ಎಂದು ಹೇಳುತ್ತಾನೆ.

ಶಿವ ಪಾರ್ವತಿ ಈರ್ವರೂ ಅಪಾರ ಮತ್ತು  ಅಪೂರ್ವ
 ಕರುಣಾಮಯಿಗಳು. “ದಯವೇ ಧರ್ಮದ ಮೂಲವಯ್ಯ” ಎಂಬ 
ಮಾತಿಗೆ ಅವರಿಬ್ಬರೂ ಆದಿ ಮತ್ತು ಬುನಾದಿ. 

ಕವಿಕುಲಧಾಮ, ಕವಿರತ್ನ ಕಾಳಿದಾಸ, 
ಶಿವ-ಪಾರ್ವತಿಯರನ್ನು ಕುರಿತು
 “ವಾಗರ್ಥಾವಿವ ಸಂಪ್ರುಕ್ತೌ, ವಾಗರ್ಥಃ ಪ್ರತಿಪತ್ತಯೇ| 
ಜಗತಃ ಪಿತರೌ ವಂದೇ, ಪಾರ್ವತಿಪರಮೇಶ್ವರೌ” ಎಂದು 
ಅದೇಕೆ ಹೇಳಿದ್ದಾನೆ ಎಂಬುವುದಕ್ಕೆ ಈ ಕಥೆಯೊಂದು 
ನಿದರ್ಶನ ಅಷ್ಟೇ.  ಪಾರ್ವತಿ, ಪರಮೇಶ್ವರರು 
ಜಗತ್ತಿನ ತಂದೆ, ತಾಯಿಯಾಗಿ ಅದು ಹೇಗೆ 
ತಮ್ಮ ಕರ್ತವ್ಯವನ್ನು ಸೂಕ್ಷ್ಮವಾಗಿ ನಿಭಾಯಿಸುತ್ತಾರೆ 
ಎಂಬುವುದಕ್ಕೆ ಕಥೆ ಇದು, ಸಾಕ್ಷಿ ಹೇಳುತ್ತದೆ. 

ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತುಮಕೂರು

...............
ಭಗವದ್ಗೀತೆಯಲ್ಲಿ
ವಿಟ್ಯಾಮಿನ್ ``ಎ'' ಟು ``ಝೆಡ್  ಗಳಿವೆ.
      ಡಾ. ಶಿವಾನಂದ ಶಿವಾಚಾರ್ಯರು
ತುಮಕೂರು 03. ``ಭಗವದ್ಗೀತೆಯಲ್ಲಿ ಬರೀ ``ಎ, ಬಿ, ಸಿ, ಡಿ, ಇ''ಗಳೇನು ಬಂತು? ಭಗವದ್ಗೀತೆಯಲ್ಲಿ ``ಎ'' ಟು ``ಝೆಡ್ ವಿಟ್ಯಾಮಿನ್‍ಗಳಿವೆ. ಭಗವದ್ಗೀತೆ ಮೃತಸಂಜೀವಿನಿ ಇದ್ದ ಹಾಗೆ. ಇದು ಸತ್ತಂತಿಹರನ್ನು ಬಡಿದೆಚ್ಚರಿಸುತ್ತದೆ. ಭಗವದ್ಗೀತೆಯಲ್ಲಿ ಅಸ್ವಸ್ಥ ಮನಸ್ಸನ್ನು ಸ್ವಸ್ಥಗೊಳಿಸುವ ಶಕ್ತಿ ಇದೆ. ಭಗವದ್ಗೀತೆ ರುಗ್ಣ ಮನಸ್ಸನ್ನು ನಿರಾಮಯಗೊಳಿಸುತ್ತದೆ. ಭಗವದ್ಗೀತೆ ಹೇಡಿ ಮನಸ್ಸನ್ನು ಯೋಧ ಮನಸ್ಸನ್ನಾಗಿ ಮಾರ್ಪಡಿಸುತ್ತದೆ.
ಭಗವದ್ಗೀತೆ ಆಧ್ಯಾತ್ಮಿಕ ಲೋಕದ ರಾಷ್ಟ್ರಗೀತೆ, ನಾಡಗೀತೆ ಇದ್ದಂತಿದೆ. ಭಗವದ್ಗೀತೆಯಲ್ಲಿನ ಪ್ರತಿಯೊಂದು ಮಾತೂ ಸಹ ಸಕಾಲಿಕ, ಸಾಂದರ್ಭಿಕ ಮತ್ತು ಸಾರ್ವಕಾಲಿಕ.
ಭಗವದ್ಗೀತೆಯಲ್ಲಿ ಬರೀ ಪತಿತೋದ್ಧಾರಕ ಮಾತ್ರವಲ್ಲ, ಅದರಲ್ಲಿ ಶಿಥಿಲೋದ್ಧಾರಕ ಮತ್ತು ಜೀರ್ಣೋದ್ಧಾರಕ ಶಕ್ತಿ ಇದೆ. ಬಾಲ್ಯದಿಂದಲೇ ಭಗವದ್ಗೀತೆಯನ್ನು ಓದುತ್ತ ಮತ್ತು ಕೇಳುತ್ತ ಬೆಳೆದವನು ಕರ್ಮಯೋಗಿ ಇಲ್ಲವೆ ಜ್ಞಾನಯೋಗಿ ಇಲ್ಲವೆ ಭಕ್ತಿಯೋಗಿಯಾಗುತ್ತಾನೆ ಎಂದು ತುಮಕೂರು ಹಿರೇಮಠಾಧ್ಯಕ್ಷರಾದ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮಿಗಳು ನಿನ್ನೆ ವಿದ್ಯಾಮಾನಸ ವಿದ್ಯಾಲಯದ ಮಕ್ಕಳಿಗೆ ಭಗವದ್ಗೀತೆಯ ಪಾಠಮಾಡುತ್ತ | ಈ ಮೇಲಿನ ಮಾತುಗಳನ್ನು ಹೇಳಿದರು.
ಅವರು ಮತ್ತೆ ಮುಂದುವರಿದು, ``ವಿದೇಶಗಳಲ್ಲಿ ಭಗವದ್ಗೀತೆ ನಡೆಸಂಹಿತೆಯಾಗಿ ಚಲಾವಣೆಯಲ್ಲಿದೆ. ನಮ್ಮಲ್ಲಿ ಅದು ಬರೀ ನುಡಿಸಂಹಿತೆಯಾಗಿ ವೇದಿಕೆಗಳ ಮೇಲೆ ವಿಜೃಂಭಿಸಿಕೊಂಡಿದೆ. ಭಗವದ್ಗೀತೆಯನ್ನು ಓದದವರು ಭಗವದ್ಗೀತೆಯನ್ನು ಬದುಕುತ್ತಿದ್ದಾರೆ. ಭಗವದ್ಗೀತೆಯನ್ನು ಓದಿಕೊಂಡವರು ಭಗವದ್ಗೀತೆಯನ್ನು ಪ್ರವಚನದ ಸರಕನ್ನಾಗಿಸಿದ್ದಾರೆ.
ಭಗವದ್ಗೀತೆ ನಮಗೆಲ್ಲ ``ಆತ್ಮನಾ ಉದ್ಧರೇತ್ ಆತ್ಮಾನಮ್ ಎಂದು ಸ್ವಾವಲಂಬನದ ಪಾಠಮಾಡಿದೆ. ಆದರೆ ನಾವುಗಳು ನಮ್ಮ ಉದ್ಧಾರಕ್ಕಾಗಿ ಭಗವಂತನ ಅವತಾರಗಳನ್ನು ನಂಬಿಕೊಂಡು ಕುಳಿತುಕೊಂಡಿದ್ದೇವೆ. ಎಲ್ಲಿಯವರೆಗೆ ನಾವು ಸ್ವಾವಲಂಬಿಗಳಾಗುವುದಿಲ್ಲವೋ ಅಲ್ಲಿಯವರೆಗೆ ನಮ್ಮಗಳಿಗೆ ಭಗವಂತನ ವಿರಾಟ್ ದರ್ಶನ ಆಗುವುದಿಲ್ಲ.
ದೇವರು ಹೇಳುವ ಮಹಾವಾಕ್ಯಗಳನ್ನು ಮತ್ತು ಅನುಭವದ ಮಾತುಗಳನ್ನು ನಾವುಗಳು ನಮ್ಮ ದೈನಂದಿನ  ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಭಗವದ್ಗೀತೆ ಪುಕ್ಕ, ಅಂಜುಬುರುಕ ಮತ್ತು ಅಳುಮುಂಜಿ ಚರಿತ್ರಗಳನ್ನು ಸಹಿಸಿಕೊಳ್ಳುವುದಿಲ್ಲ. ಅದು ನಮಗೆ ಶೌರ್ಯಸಿದ್ಧಾಂತವನ್ನು ಬೋಧಿಸುತ್ತದೆ ಮತ್ತು ಅದು ನಮಗೆ ಧೈರ್ಯಸೂತ್ರಗಳ ಕುರಿತು ಪಾಠಮಾಡುತ್ತದೆ. ಬ್ರಹ್ಮಜ್ಞಾನವನ್ನು ಹೊಂದಿರುವ ಗ್ರಂಥಕ್ಕೆ ಬ್ರಹ್ಮಸೂತ್ರ ಎಂದು ಕರೆಯುವ ಹಾಗೆ ಧೈರ್ಯಸೂತ್ರಗಳನ್ನು ಹೊಂದಿರುವ ಭಗವದ್ಗೀತೆಗೆ ಧೈರ್ಯಸೂತ್ರ ಎಂದು ಕರೆಯಬಹುದು. ಭಗವದ್ಗೀತೆ ``ಮಾಡು ಇಲ್ಲವೆ ಮಡಿ'' ಸಿದ್ಧಾಂತವನ್ನು ಸಾರ್ವಜನಿಕರಿಗೆ ಮನಮುಟ್ಟುವ ಹಾಗೆ ತಿಳಿಸಿದೆ ಎಂದು ಹೇಳಿದರು.
ಸಮಾರಂಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಟಿ. ಆರ್. ಲೋಕೇಶ್, ನಿರ್ದೇಶಕ ಶಿವದರ್ಶಿನಿ ಪ್ರಕಾಶ್  ಮತ್ತು ಮುಖ್ಯ ಅಧ್ಯಾಪಕಿ ದರ್ಶಿನಿ ಹಾಗೂ ವಿದ್ಯಾಮಾನಸದ ಅಧ್ಯಾಪಕರು ಮತ್ತು ವಿದ್ಯಾರ್ಥಿವೃಂದ ಮತ್ತು ಮಕ್ಕಳು ಉಪಸ್ಥಿತರಿದ್ದರು.
ಕುಮಾರಿ ಗಹನಾ ಪ್ರಾರ್ಥನಾಗೀತೆ ಹೇಳಿದರೆ ಕುಮಾರ್ ನವೀನ್‍ಕುಮಾರ್ ಸಭಾ ನಿರ್ವಹಣೆ ಮಾಡಿದರು.
ಇದೇ ಸಂದರ್ಭದಲ್ಲಿ ಪೂಜ್ಯರು ವಿದ್ಯಾರ್ಥಿ ಚುನಾವಣೆಯಲ್ಲಿ ಗೆದ್ದ ವಿದ್ಯಾರ್ಥಿಗಳಿಗೆ ಆಶೀರ್ವಾದ ಮಾಡಿ ಮಕ್ಕಳಿಗಾಗಿಯೇ ಎಂದು ತಂದ ಅಮೇರಿಕಾದ ಚಾಕಲೇಟ್‍ಗಳನ್ನು ಹಾಗೂ ಸಿಹಿಯನ್ನು ವಿತರಿಸಿದರು .
....................
Good Evening, 28th July 2018 
@ Hiremath, Tumkur
ಭಾರತದಲ್ಲಿ ಬರೀ ಜನಸಂಖ್ಯೆ ಮಾತ್ರವಲ್ಲ
ಗುರೂಜಿಗಳ ಸಂಖ್ಯೆ ಕೂಡ ಹೆಚ್ಚಿಕೊಂಡಿದೆ!!

ಡಾ. ಶಿವಾನಂದ ಶಿವಾಚಾರ್ಯರು
 ಜುಲೈ ೨೭: “ಭಾರತದಲ್ಲಿ ಬರೀ ಜನಸಂಖ್ಯೆ ಮಾತ್ರವಲ್ಲ; 
ಇತ್ತೀಚೆಗೆ ಗುರೂಜಿಗಳ ಸಂಖ್ಯೆ ಕೂಡ ಹೆಚ್ಚಾಗುತ್ತಲಿದೆ. 
ಈ ಮೊದಲು, ಬುದ್ಧ, ಬಸವ, ವರ್ಧಮಾನ, ಮಹಾವೀರ, 
ಶಂಕರ, ರಾಮಾನುಜರ ಕಾಲದಲ್ಲಿ ಸ್ಪಿರಿಚ್ಯುವಲ್ ಮೇಡ್ 
ಗುರುಗಳು ಮಾತ್ರ ಸಿಕ್ಕುತ್ತಿದ್ದರು. 
ಈಗ ಮತ್ತು ಈ ಕಾಲದಲ್ಲಿ “ಸ್ಪಿರಿಚ್ಯುವಲ್ ಮೇಡ್” 
ಗುರುಗಳ ಸಂಖ್ಯೆ ತುಂಬ ತುಂಬಾನೇ ಕಮ್ಮಿ. 
ಈಗ ಎಲ್ಲಿ ನೋಡಿದಡಲ್ಲೆಲ್ಲ ಬರೀ ಜಾತಿ ಮೇಡ್, 
ಕಾಸ್ಟ್ ಮೇಡ್, ಕಮ್ಯುನಿಟಿ ಮೇಡ್, ಟಿ. ವ್ಹಿ. ಮೇಡ್, 
ಚಾನೆಲ್ ಮೇಡ್, ಟಿ. ವ್ಹಿ. ಪೆನಲ್ ಮೇಡ್ ಗುರುಗಳೇ 
ಹೆಚ್ಚು ಹೆಚ್ಚಾಗಿ ಸಿಕ್ಕುತ್ತಾರೆ. ಇತ್ತೀಚೆಗೆ ನಮ್ಮ ಜನಗಳಿಗೆ 
ಇಂಟರ್‌ನೆಟ್‌ನಲ್ಲಿ ಆನ್ ಲೈನ್ ಗುರುಗಳು ಕೂಡ ಸಿಕ್ಕುತ್ತಲಿದ್ದಾರೆ. 
ಅದೆಷ್ಟೇ ಗುರುಗಳು ಸಿಕ್ಕರೂ ಸಹ 
ಈ ಕಾಲದಲ್ಲಿ ಸ್ವಚ್ಛ ಹಾಗೂ ಶುಚಿರ್ಭೂತ ಗುರುಗಳು 
ಸಿಕ್ಕುವುದು ತುಂಬ ಅಪರೂಪ-ವೆನಿಸಿಬಿಟ್ಟಿದೆ. 
ಅವತ್ತಿನ ಗುರುಗಳು ಕೈಯಲ್ಲಿ ಜಪಮಣಿಯನ್ನು 
ಹಿಡಿದುಕೊಂಡು ಯಾವಾಗಲೂ “ಓಂ ನಮಃ ಶಿವಾಯ” 
ಎಂಬೀ ಪ್ರಣವಸಹಿತ ಪಂಚಾಕ್ಷರಿ ಮಂತ್ರ, 
“ಓಂ ಭೂರ್ಭುವಃ ಸ್ವಃ” ಎಂಬೀ ಗಾಯಿತ್ರಿ ಮಂತ್ರ,
 “ಓಂ ತ್ರ್ಯಂಬಕಂ ಯಜಾಮಹೇ” ಎಂಬೀ ಮಹಾಮೃತುಂಜಯ ಮಂತ್ರ,
 “ಓಂ ನಮೋ ನಾರಾಯಣಾಯ” ಎಂಬೀ ನಾರಾಯಣ 
ಮಹಾಮಂತ್ರವನ್ನು ಹೇಳಿಕೊಂಡಿರುತ್ತಿದ್ದರು. 
ಆದರೆ ಈಗಿನ ಜಾತಿ ಮೇಡ್ ಗುರುಗಳ ಕಾಲದಲ್ಲಿ 
ಆಯಾ ಜಾತೀಯ ಗುರುಗಳು ಅವರವರ 
ಜಾತಿಮಂತ್ರವನ್ನು ಹೇಳಿಕೊಂಡಿದ್ದಾರೆ. 
ಅದೊಂದು ಕಾಲವಿತ್ತು. ಅದು ಕಾಲಾತೀತ ಗುರುಗಳ ಕಾಲ. 
ಅದು ಕಾಲಾತೀವಾದ ಗುರುಗಳ ಕಾಲವಾದರೆ 
ಇದು ಮತ್ತು ಈಗ ಕಾಲಕ್ಕೆ ತಕ್ಕಂತೆ ಗುರುಗಳ ಕಾಲ!!” 
ಎಂದು ತುಮಕೂರು ಹಿರೇಮಠಾಧ್ಯಕ್ಷರಾದ
 ಡಾ. ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು 
ಗುರುಪೌರ್ಣಿಮೆಯಂದು ಶ್ರೀಮಠದಲ್ಲಿ  ಸಮಾವೇಶಗೊಂಡ 
ಭಕ್ತರಿಂದ ಗುರುವಂದನೆಯನ್ನು ಸ್ವೀಕರಿಸಿ, ನಂತರ ಭಕ್ತರನ್ನುದ್ದೇಶಿಸಿ ಆಶೀರ್ವಚನವನ್ನು ನೀಡುತ್ತ ಈ ಮೇಲಿನ ಮಾತುಗಳನ್ನು ಹೇಳಿದರು. 
ಶ್ರೀಗಳು ಮತ್ತೆ ಮುಂದುವರಿದು,
 “ಟಿ.ವ್ಹಿ.ಯಲ್ಲಂತೂ ಈಗ ಟಿ. ವ್ಹಿ. ಗುರುಗಳ ಅಬ್ಬರವೋ ಅಬ್ಬರ!! 
ಜನಗಳು ಸುಮ್ಮನಿರಬೇಕೆಂದರೂ ಅವರು ಜನಗಳನ್ನು 
ಸುಮ್ಮನಿರಲು ಬಿಡುವುದಿಲ್ಲ. ಅವರು ಅಮಾಯಕ ಜನಗಳ 
ತಲೆಯಲ್ಲಿ, ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳ 
ತಲೆಯಲ್ಲಿ ಆಗಾಗ್ಗೆ ಅದೇನೇನೋ ಹುಳುಗಳನ್ನು 
ಬಿಟ್ಟುಕೊಂಡಿರುತ್ತಾರೆ. ಜನಗಳಿಗೆ ಅವರು ಗ್ರಹಗತಿ 
ಮತ್ತು ಗ್ರಹಣಗತಿಗಳನ್ನು ಹೇಳಿಕೊಂಡು ಜನಗಳ 
ತಲೆಯನ್ನು ತಿಂದುಕೊಂಡಿರುತ್ತಾರೆ.

ನಿಜವಾಗಿ ಹೇಳುತ್ತೇವೆ, ನಮ್ಮ ಜನಗಳು ತಮಗೆ ಗುರುಗಳನ್ನು ಆಯ್ಕೆಮಾಡಿಕೊಳ್ಳಬೇಕಾದ ಸಂದರ್ಭದಲ್ಲಿ ತುಂಬ ಹುಷಾರಾಗಿರಬೇಕು. 
ಹಿಂದೀ ಭಾಷೆಯಲ್ಲೊಂದು ಸುಪ್ರಸಿದ್ಧ ಲೋಕೋಕ್ತಿ ಇದೆ, 
 “ಪಾನೀ ಪೀನಾ ಛಾನ್ ಕೇ, ಗುರು ಕರನಾ ಜಾನ್ ಕೇ” ಎಂದು. 
 ನೀರನ್ನು ಸೋಸಿ ಕುಡಿಯಬೇಕಂತೆ. 
ಗುರುಗಳ ಹಿಂದು-ಮುಂದು ಮತ್ತು ಹಿನ್ನೆಲೆಗಳನ್ನು 
ಚೆನ್ನಾಗಿ ತಿಳಿದುಕೊಂಡುಬಿಟ್ಟು ಅವರ ಫ್ಲ್ಯಾಶ್‌ಬ್ಯಾಕ್‌ಗಳನ್ನೆಲ್ಲ 
ನೋಡಿಬಿಟ್ಟು ಅವರನ್ನು ಗುರುಗಳನ್ನಾಗಿ ಮಾಡಿಕೊಳ್ಳಬೇಕಂತೆ. 
ಭರ್ಜರಿಯಾಗಿ ಕಾವಿ ಧರಿಸಿದ, ಜೋರಾಗಿ ಗಡ್ಡ ಬಿಟ್ಟ
 ಗುರುಗಳನ್ನು ನೋಡಿ ನಮ್ಮ ಜನಗಳು ದಬಕ್ಕನೇ ಹೋಗಿ
 ಅವರ ಪಾದಗಳ ಮೇಲೆ ಬೀಳಬಾರದು. 
ಯಾವ ಹುತ್ತದಲ್ಲಿ ಯಾವ ಹಾವು ಇರುತ್ತದೆಯೋ ಯಾರಿಗೂ ಗೊತ್ತು? 

ಈ ಸಂದರ್ಭದಲ್ಲಿ ಇನ್ನೊಂದು ಮಾತನ್ನು ಹೇಳಲೇಬೇಕು. 
ಈ ಮೊದಲು ಜನಗಳ ಮಧ್ಯದಲ್ಲಿ ಧರ್ಮಪಾಲರಾಗಿ 
ಗುರುತಿಸಿಕೊಳ್ಳುತ್ತಿದ್ದ ಗುರುಗಳು ಈಗ ಶೋಕಿಲಾಲ್‌ರಾಗುತ್ತಿದ್ದಾರೆ. 
ಆದ್ದರಿಂದ ನಿಮ್ಮನ್ನು ನೀವು ಗುರುಗಳಿಗೆ ಅರ್ಪಿಸಿಕೊಳ್ಳುವ 
ಮೊದಲು ನೀವು ಗುರುಗಳನ್ನು ಚೆನ್ನಾಗಿ ಪರೀಕ್ಷಿಸಿ. 
ಮೊದಲು ನೀವು ಗುರುಗಳನ್ನು ಪರೀಕ್ಷಿಸಬೇಕು. 
ನಂತರ ಬೇಕೆನಿಸಿದರೆ ಗುರುಗಳು ಕೂಡ 
ನಿಮ್ಮನ್ನು ಪರೀಕ್ಷಿಸುವುದಕ್ಕೆ ಅವಕಾಶ ಮಾಡಿಕೊಡಿ” ಎಂದು ಹೇಳಿದರು.

ಗುರುವಂದನೆಗೆ ಮುಂಚೆ ಭಕ್ತಾದಿಗಳೆಲ್ಲ ಸೇರಿ 
ಸಾಮೂಹಿಕವಾಗಿ ಗುರುಗಳ ಪಾದಪೂಜೆಯನ್ನು ಮಾಡಿದರು. 
ಮಠದ ಮಕ್ಕಳು ವೇದಘೋಷವನ್ನು ಮಾಡಿದರು. 
ಭಕ್ತಾದಿಗಳು ಗುರುಸ್ತುತಿಗಳನ್ನು ಹೇಳಿದರು. 
ಇದೇ ಸಂದರ್ಭದಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ 
ಅಧ್ಯಕ್ಷೆ ಶೀಮತಿ ಬಾ. ಹ. ರಮಾಕಮಾರಿಯವರು, 
ಕನ್ನಡಪ್ರಭದ ಉಗಮ ಶ್ರೀನಿವಾಸ ಶ್ರೀಮಠಕ್ಕೆ ಆಗಮಿಸಿ 
ಗುರುಗಳ ದರ್ಶನ ಪಡೆದರು. 
ಗುರುಗಳು ಭಕ್ತಾದಿಗಳೆಲ್ಲರಿಗೂ ಆಶೀರ್ವಾದವನ್ನು ಮಾಡಿ 
ಮಾನಸ ಸರೋವರದ ತೀರ್ಥ ಮತ್ತು ಕೈಲಾಸಪರ್ವತದ
 ಪ್ರಸಾದವನ್ನು ನೀಡಿದರು.
.....
Good Morning
27th July 2018, Guru PurNima 
@ Hiremath, Tumkur 
ಗುರುಪಾದವ ಹಿಡಿದಲ್ಲಿ ಕಾಣದುದ ಕಾಣಬಹುದು!! 
ದಯಾನಂದ ಸರಸ್ವತಿಯವರು 
ಆರ್ಯ ಸಮಾಜದ ಸಂಸ್ಥಾಪಕರು. 
ಅವರು ತಮ್ಮ ಯೌವನದ ದಿನಗಳಲ್ಲಿ ಯೋಗ್ಯ ಗುರುಗಳ 
ಅನ್ವೇಷಣೆಯನ್ನು ಮಾಡುತ್ತ  
ತುಂಬ ಸಮಯ ಅಲೆಯುತ್ತಾರೆ. 
ಅವರು ಅವಿಶ್ರಾಂತವಾಗಿ ಊರೂರು ಸುತ್ತುತ್ತಾರೆ. 
ಬಹಳ ದಿನಗಳವರೆಗೆ ದಯಾನಂದ ಸರಸ್ವತಿಯವರಿಗೆ  
ಯೋಗ್ಯ ಗುರುಗಳು ಸಿಕ್ಕುವುದೇ ಇಲ್ಲ. 
ಹಿಂದೀ ಭಾಷೆಯಲ್ಲಿ ಲೋಕೋಕ್ತಿಯೊಂದಿದೆ, 
“ಗುರು ಕೀಜೆ ಜಾನ್ ಕರ್, ಪಾನೀ ಪೀಜೆ ಛಾನ್ ಕರ್” ಎಂದು. 
ನೀರನ್ನು ಸೋಸಿ ಕುಡಿಯಬೇಕಂತೆ. 
ಗುರುಗಳ ಅಂದರ್-ಬಾಹರ್‌ಗಳನ್ನು ತಿಳಿದುಕೊಂಡು 
ಗುರುಗಳನ್ನು ಮಾಡಿಕೊಳ್ಳಬೇಕಂತೆ!!
ಬಹುದಿನಗಳ ಅಲೆದಾಟದ ನಂತರ 
ದಯಾನಂದರಿಗೆ ಗುರುಗಳು ಸಿಕ್ಕುತ್ತಾರೆ.
ಹುಟ್ಟುಕುರುಡರಾದ ವಿರಜಾನಂಧ ಮಹಾರಾಜರನ್ನು  
ದಯಾನಂದರು ಗುರುಗಳಾಗಿ ಸ್ವೀಕರಿಸುತ್ತಾರೆ. 
ವೇದವಿಜ್ಞಾನದಲ್ಲಿ ವಿರಜಾನಂದರದು ಎತ್ತಿದ ಕೈ. 
ವಿರಜಾನಂದರ ಹೊರಗಣ್ಣುಗಳು ಮುಚ್ಚಿಕೊಂಡಿದ್ದವೇನೋ ನಿಜ, 
ಆದರೆ ಅವರ ಒಳಗಣ್ಣುಗಳು ತೆರೆದುಕೊಂಡಿದ್ದವು.  
ದಯಾನಂದ ಸರಸ್ವತಿಯವರು ಆಪ್ತವಾಗಿ, 
ಅಂಗವಾಗಿ ಗುರುಗಳ ಸೇವೆ ಮಾಡಿಕೊಂಡಿದ್ದರು. 
ಅದೊಂದು ದಿನ ದಯಾನಂದರು ಆಶ್ರಮದ 
ಗೋಶಾಲೆಯನ್ನು ಶುಚಿಗೊಳಿಸಿಕೊಂಡಿದ್ದಾಗ 
ಒಂದಷ್ಟು ಸಗಣಿ ಮತ್ತು ಕಸ ಅವರ ಗಮನಕ್ಕೆ 
ಬಾರದ ಹಾಗೆ ಅದೆಲ್ಲೋ ಒಂದು ಚೂರು 
ಹಾಗೆಯೇ ನೆಲದ ಮೇಲೆ ಬಿದ್ದುಕೊಂಡಿತ್ತು. 
ಕುರುಡ ವಿರಜಾನಂದರು ಗೋಶಾಲೆಯಲ್ಲಿ 
ನಡೆದುಬರುತ್ತಿದ್ದಾಗ ಸಗಣಿಯದು ಅವರ 
ಪಾದಗಳಿಗೆ ಮೆತ್ತಿಕೊಳ್ಳುತ್ತದೆ. 
ದಯಾನಂದರ ಮೇಲೆ ಗುರು ವಿರಜಾನಂದರಿಗೆ 
ವಿಪರೀತ ಕೋಪಬರುತ್ತದೆ. 
ಅವರು ಒಂದು ಬೆತ್ತವನ್ನು  ತೆಗೆದುಕೊಂಡು 
ದಯಾನಂದರಿಗೆ  ಬೆತ್ತದಿಂದ ಚೆನ್ನಾಗಿ ಥಳಿಸುತ್ತಾರೆ. 
ದಯಾನಂದರ ಮೈಯೆಲ್ಲ ರಕ್ತಸಿಕ್ತವಾಗುತ್ತದೆ. 
ಮೈತುಂಬ ಬಾಸುಂಡೆ ಬರುತ್ತದೆ. 
ಆದರೆ ದಯಾನಂದರಿಗೆ ತಮ್ಮ ರಕ್ತಸಿಕ್ತವಾದ  
ಮೈಯತ್ತ ಗಮನವಿಲ್ಲ.  
ದಯಾನಂದರು ಕೋಪದ ಭರಾಟೆಯಲ್ಲಿ 
ತಮಗೆ ಬೆತ್ತದಿಂದ ಏಟುಕೊಟ್ಟ ಗುರುಗಳ ಕೈಗಳಿಗೆ 
ಎಣ್ಣೆಯನ್ನು ಹಚ್ಚುತ್ತ ಗುರುಗಳ ಕೈಯನ್ನು 
ಮೃದುವಾಗಿ ನೀವತೊಡಗುತ್ತಾರೆ. 
ಗುರುಗಳಿಗೆ ಆಶ್ಚರ್ಯವಾಗುತ್ತದೆ. 
ಅವರು ದಯಾನಂದರನ್ನು ಕೇಳುತ್ತಾರೆ, 
“ನನ್ನ ಕೈಯನ್ನೇಕೆ ನೀವುತ್ತಿರುವಿ?” ಎಂದು. 
ದಯಾನಂದ ಸರಸ್ವತಿಯವರು, 
“ಗುರುಗಳೇ, ನನ್ನದೇನೋ ಯೌವನದಿಂದ 
ಸೊಕ್ಕಿದ ಮೈ. ಅದರಲ್ಲಿ ಏಟುಗಳನ್ನು 
ಸಹಿಸಿಕೊಳ್ಳುವ ಶಕ್ತಿ ಇದೆ. 
ನನ್ನನ್ನು ಥಳಿಸುವಾಗ ತಮ್ಮ ಮೃದುವಾದ ಕೈಗಳಿಗೆ 
ಅದೆಷ್ಟು ನೋವಾಯಿತೋ ಏನೋ? 
ಅದಕ್ಕಾಗಿ ತಮ್ಮ ಕೈಗಳಿಗಾದ ನೋವನ್ನು 
ಕಡಿಮೆ ಮಾಡುವುದಕ್ಕಾಗಿ ನಾನು ತಮ್ಮ ಕೈಗಳಿಗೆ 
ಎಣ್ಣೆಯ ಮಸಾಜ್ ಮಾಡಿ 
ಅವುಗಳನ್ನು ನೀವುತ್ತಿದ್ದೇನೆ” ಎಂದು. 
ದಯಾನಂದ ಸರಸ್ವತಿಯವರ ಮಾತುಗಳನ್ನು ಕೇಳಿ 
ಕುರುಡ ಗುರು ವಿರಜಾನಂದರು ಮಾತ ಬಾರದೆ 
ಮೂಕವಿಸ್ಮಿತರಾಗುತ್ತಾರೆ. ಇದು ಗುರುಭಕ್ತಿ. 
ಇದು ಗುರುನಿಷ್ಠೆ. 
ಇದು ಗುರುವಿನ ಗುಲಾಮನಾಗುವ ಪರಿ!! 
ಬರೀ ವೇದಿಕೆಗಳಲ್ಲಿ ಹಾಗೂ ಭಾಷಣಗಳಲ್ಲಿ 
“ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” 
ಎಂದು ಜೋರು ಜೋರಾಗಿ ಹೇಳುವುದು ಗುರುಭಕ್ತಿಯಲ್ಲ. 
ಆಷಾಢ ಮಾಸದ ಗುರುಪೌರ್ಣಿಮೆಯಂದು 
ಇಡೀ ದೇಶ ಗುರುವಂದನೆ, ಗುರುಸ್ತವನ, 
ಗುರುಪೂಜೆ, ಮತ್ತು ಗುರುಭಜನೆ ಮಾಡುತ್ತದೆ. 
ನಾವು ಭಾರತೀಯರು ನಮ್ಮ ಸಂಸ್ಕೃತಿಯಲ್ಲಿ 
ಗುರುವಿಗೆ ಪರಮೋಚ್ಚ ಸ್ಥಾನಮಾನಗಳನ್ನು ನೀಡಿದ್ದೇವೆ. 
ನಾವು-ನೀವುಗಳು 
“ಗುರುದೇವೋ ಮಹಾದೇವೋ, ಗುರುದೇವಸ್ಸದಾಶಿವಃ| 
ಗುರುದೈವಾತ್ ಪರಂ ನಾಸ್ತಿ” ಎಂದು 
ಗುರುಗಳನ್ನು ಅನನ್ಯವಾಗಿ ನಂಬಿಕೊಂಡು ಬದುಕಿದ್ದೇವೆ. 
ನಾವುಗಳು ಶಿವಶಕ್ತಿಯರಿಗಿಂತ ಗುರುಭಕ್ತಿ ಮುಖ್ಯ 
ಎಂದಂದುಕೊಂಡು ಬದುಕಿದ್ದೇವೆ. 
ಸುಪ್ರಭಾತ ಸಮಯದಲ್ಲಿ ನಾವು ಕರದರ್ಶನ 
ಮಾಡಿಕೊಳ್ಳದಿದ್ದರೂ ದಿನದಲ್ಲಿ 
ಒಂದು ಬಾರಿಯಾದರೂ ಸಹ ಗುರುದರ್ಶನವನ್ನು 
ಮಾಡಲೇಬೇಕು. 
ನಮ್ಮ ಜನಗಳು ದೇವರುಗಳಿಗೆ 
“ವಿ ಡೋಂಟ್ ಕೇರ್” ಎಂದು ಹೇಳಬಹುದು. 
ಆದರೆ ಗುರುಗಳಿಗೆ ಅವರೆಂದೂ ಹಾಗೆ ಹೇಳಲಾರರು!!! 
ನಮ್ಮ ಜನಗಳು ಗುರುಗಳನ್ನೇ ಸಾಕ್ಷಾತ್ 
ಬ್ರಹ್ಮ, ವಿಷ್ಣು, ಮಹೇಶ್ವರ ಎಂದು ಭಾವಿಸಿದ್ದಾರೆ.
 “ಶಿವಪಥವನರಿವೊಡೆ ಗುರುಪಥವೇ ಮೊದಲು” ಎಂಬ ಮಾತು 
ನಮ್ಮ ಜನರಿಗೆ ಚೆನ್ನಾಗಿ ಗೊತ್ತಿದೆ. 
“ಹರ ಮುನಿದರೂ ಗುರು ಕಾಯ್ವನೆಂಬ ಭರವಸೆ 
ನಮ್ಮ ಜನಗಳಲ್ಲಿದೆ. “ಅಮ್ಮ” ಎಂಬರಡಕ್ಷರಗಳಲ್ಲಿ 
ಸ್ವರ್ಗವಿರುವಂತೆ ‘ಗುರು’ ಎಂಬರಡಕ್ಷರಗಳಲ್ಲಿ ಮೋಕ್ಷವಿದೆ. 
ಇದು ನಮ್ಮ ಜನಗಳ ನಂಬಿಕೆ. 
ಸ್ಕಂದಪುರಾಣವು ಕೂಡ, 
“ಧ್ಯಾನಮೂಲಂ ಗುರೋರ್ಮೂರ್ತಿಃ, 
ಪೂಜಾಮೂಲಂ ಗುರೋಃ ಪದಮ್| 
ಮಂತ್ರಮೂಲಂ ಗುರುವಾಕ್ಯಂ, 
ಮೋಕ್ಷಮೂಲಂ ಗುರೋಃ ಕೃಪಾ||” ಎಂದು 
ಈ ಮಾತಿಗೆ ಪುಷ್ಟಿಯನ್ನು ನೀಡುತ್ತದೆ. 
ಸುಪ್ರಸಿದ್ಧ ವಚನಕಾರರಲ್ಲಿ ಒಬ್ಬರಾದ 
ಷಣ್ಮುಖ ಶಿವಯೋಗಿಗಳು
 “ಗುರುಚರಣವ ಪೂಜಿಸಿ ಎನ್ನ ಹಸ್ತಂಗಳು 
ಪರುಷವಾದವು. ಗುರುಚರಣವ ನೋಡಿ 
ಎನ್ನ ಕಂಗಳು ಪರುಷವಾದವು. 
ಗುರುಚರಣವ ಹಾಡಿ ಹರಸಿ 
ಎನ್ನ ಜಿಹ್ವೆ ಪರುಷವಾಯಿತ್ತು. 
ಗುರುಚರಣವ ನೆನೆದು ಎನ್ನ ಮನ 
ಪರುಷವಾಯಿತ್ತು. ಗುರುಚರಣವ ಧ್ಯಾನಿಸಿ 
ಎನ್ನ ಭಾವ ಪರುಷವಾಯಿತ್ತು 
ನೋಡಾ ಅಖಂಡೇಶ್ವರಾ” ಎಂದು ಹೇಳುತ್ತ 
ಗುರುಗಾಥೆಗೆ ಧ್ವನಿಯಾಗಿದ್ದಾರೆ.
ಅಲ್ಲಮಪ್ರಭುಗಳು ಹೇಳುತ್ತಾರೆ,
 “ಕಂಡುದ ಹಿಡಿಯಲೊಲ್ಲದೆ, ಕಾಣದುದನರಸಿ 
ಹಿಡಿದಿಹೆನೆಂದು ಸಿಕ್ಕದೆಂಬ ಬಳಲಿಕೆಯ ನೋಡಾ! 
ಕಂಡುದನೆ ಕಂಡು, ಗುರುಪಾದವ ಹಿಡಿದಲ್ಲಿ 
ಕಾಣದುದ ಕಾಣಬಹುದು ಕಾಣಾ ಗೊಹೇಶ್ವರಾ!!” ಎಂದು. 
“ಗುರುವಿಲ್ಲದೆ ಗತಿ ಇಲ್ಲ. 
ಗುರುವಿಲ್ಲದೆ ಮತಿ ಇಲ್ಲ”. 
ಗುರುಕಾರುಣ್ಯಕ್ಕೆ ಪಾತ್ರರಾಗದೆ 
ಇರುವ ಕಾರಣದಿಂದಾಗಿ ಕರ್ಣ, 
ಏಕಲವ್ಯರಂಥ ಮಹಾನುಭಾವರೂ ಕೂಡ 
ತಮ್ಮ ಜೀವನದಲ್ಲಿ ಅದೆಂಥ ದುರಂತವನ್ನು 
ಅನುಭವಿಸಿದರು ಎಂಬ ವಿಷಯವದು
 ನಮ್ಮೆಲ್ಲರಿಗೂ ಗೊತ್ತೇ ಇದೆ.
“ನೀನೊಲಿದರೆ ಕೊರಡು ಕೊನರುವುದಯ್ಯ, 
ಬರಡು ಹಯನಹುದಯ್ಯ, 
ವಿಷವು ಅಮೃತವಹುದಯ್ಯ” ಎಂಬ ಮಾತನ್ನು 
ದೇವರ ವಿಷಯದಲ್ಲಿ ಹೇಳುವ ಹಾಗೆ 
ಗುರುಗಳ ವಿಷಯದಲ್ಲೂ ಧಾರಾಳವಾಗಿ ಹೇಳಬಹುದು. 
ಗುರು ಒಲಿದರೆ ಹುತ್ತವದು ವಾಲ್ಮೀಕಿಯಾಗುತ್ತದೆ, 
ಅಂಗುಲಿಮಾಲಾನಂಥ ಅಸುರ ಪ್ರಕೃತಿ 
ಬೌದ್ಧಭಿಕ್ಕುವಾಗುತ್ತದೆ, 
ಆಮ್ರಪಾಲಿಯಂಥ ಪಣ್ಯಾಂಗನೆ ಪುಣ್ಯಾಂಗನೆಯಾಗಿ 
ಕೃತಕೃತ್ಯತೆಯನ್ನು ಅನುಭವಿಸುತ್ತಾಳೆ. 
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತುಮಕೂರು
.........
ವಿದ್ಯೆ ಎಂದರೆ ಅದು ಸಹಾನುಭೂತಿ ಮತ್ತು ಸಮಾನುಭೂತಿ
ನಾಲಂದಾ ವಿಶ್ವವಿದ್ಯಾಲಯ ವಿಶ್ವದ ಪ್ರಸಿದ್ಧ ವಿಶ್ವವಿದ್ಯಾಲಯಗಳಲ್ಲಿ ಒಂದು. ಪ್ರಾಚೀನ ಭಾರತದಲ್ಲಿ ನಾಲಂದಾ ವಿಶ್ವವಿದ್ಯಾಲಯಕ್ಕೆ ಬಹುದೊಡ್ಡ ಹೆಸರಿತ್ತು. ನಾಲಂದಾ ವಿಶ್ವವಿದ್ಯಾಲಯದಲ್ಲಿ ಓದುವುದಕ್ಕೆ ವಿಶ್ವದ ಮೂಲೆ ಮೂಲೆಗಳಿಂದ ವಿದ್ಯಾರ್ಥಿಗಳು ಬರುತ್ತಿದ್ದರು. ನಾಲಂದಾ ವಿಶ್ವವಿದ್ಯಾಲಯದ ಪದವಿಗೆ ಅವತ್ತಿನ ಕಾಲದಲ್ಲಿ ಭಾರೀ ಮನ್ನಣೆ ಇತ್ತು.
ನಾಲಂದಾ ವಿಶ್ವವಿದ್ಯಾಲಯದಲ್ಲಿ ಶಿಕ್ಷಣವೆಲ್ಲ ಮುಗಿದಾದ ಮೇಲೆ ಅಲ್ಲಿನ ಕುಲಪತಿಗಳು ಅನುಮತಿಯನ್ನು ಕೊಟ್ಟಾದ ಮೇಲೆಯೇ ಅಲ್ಲಿನ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದಿಂದ ಹೊರಡಬೇಕಿತ್ತು. ಅದು ಅಲ್ಲಿನ ನಿಯಮ ಮತ್ತು ನೀತಿಸಂಹಿತೆ. ಶಿಕ್ಷಣವೆಲ್ಲ ಮುಗಿದಾದ ಮೇಲೆಯೂ ಅದೆಷ್ಟೋ ದಿನಗಳವರೆಗೆ ಗುರುಗಳು ವಿಶ್ವವಿದ್ಯಾಲಯದಿಂದ ಹೊರಡುವುದಕ್ಕೆ ವಿದ್ಯಾರ್ಥಿಗಳಿಗೆ ಅನುಮತಿ ಕೊಡುತ್ತಿರಲಿಲ್ಲ. ಸ್ನಾತಕೋತ್ತರ ವಿದ್ಯಾರ್ಥಿಗಳ ಚಲನವಲನಗಳನ್ನು ನಿರೀಕ್ಷಿಸಿ ಪರೀಕ್ಷಿಸಿ ಅವರ ಸಾಮಾಜಿಕ ಬದ್ಧತೆಯನ್ನು ವಿಮರ್ಶೆಗೆ ಒಳಪಡಿಸಲಾಗುತ್ತಿತ್ತು.
ಅದೊಂದು ದಿನ ವಿದ್ಯೆಯನ್ನು ಪೂರ್ಣಗೊಳಿಸಿದ ಮೂವರು ಜನ ವಿದ್ಯಾರ್ಥಿಗಳು ಕುಲಪತಿಗಳ ಬಳಿ ಬಂದು, “ಗುರುಗಳೇ, ನಮ್ಮ ಸ್ನಾತಕೋತ್ತರ ಶಿಕ್ಷಣ ಮುಗಿದು ಮಾಹೆಗಳು ಕಳೆದುಹೋಗಿವೆ. ನಮ್ಮ ವಿದ್ಯಾಭ್ಯಾಸವೆಲ್ಲ ಮುಗಿದಿದೆ. ಇನ್ನು ನಮಗೆ ವಿಶ್ವವಿದ್ಯಾಲಯದಿಂದ ನಿರ್ಗಮಿಸಲು ಅನುಮತಿ ಕೊಡಬೇಕು” ಎಂದು ವಿನಂತಿಸಿಕೊಳ್ಳುತ್ತಾರೆ.
ಮನವಿಯನ್ನು ಮನ್ನಿಸಿದ ಗುರುಗಳು, “ಆಯ್ತು, ಇವತ್ತು ಸಂಜೆ ಆರು ಗಂಟೆಯ ನಂತರ ನೀವು ಹೊರಡಬಹುದು. ನಿಮಗೆ ವಿಶ್ವವಿದ್ಯಾಲಯ ಅನುಮತಿ ನೀಡುತ್ತದೆ” ಎಂದು ಹೇಳುತ್ತಾರೆ.
ಕುಲಪತಿಗಳು ವಿದ್ಯಾರ್ಥಿಗಳನ್ನು ಪರೀಕ್ಷಿಸಲೆಂದು ಅವರು ಹಾದುಹೋಗುವ ಒಂದು ಚಿಕ್ಕದಾರಿಯಲ್ಲಿ ಒಂದಷ್ಟು ಮುಳ್ಳುಗಳನ್ನು ಹರಡುತ್ತಾರೆ. ಮುಳ್ಳುಗಳನ್ನು ಕಂಡು ಅವರದೇನು ಮಾಡುತ್ತಾರೆ ಎಂದು ನೋಡುವುದಕ್ಕಾಗಿ ಅವರು ಅಲ್ಲಿಯೇ ಪೊದೆಯೊಂದರಲ್ಲಿ ಅಡಗಿ ಕುಳಿತುಕೊಳ್ಳುತ್ತಾರೆ.
ವಿಶ್ವವಿದ್ಯಾಲಯದಿಂದ ಹೊರಟ ವಿದ್ಯಾರ್ಥಿಗಳು ಚಿಕ್ಕನೆಯ ದಾರಿಯಲ್ಲಿ ನಡೆದು ಬರುತ್ತಿರುವಾಗ ದಾರಿಯಲ್ಲಿ ಮುಳ್ಳುಗಳು ಹರಡಿಕೊಂಡಿರುವುದನ್ನು ನೋಡುತ್ತಾರೆ. ಇಬ್ಬರು ವಿದ್ಯಾರ್ಥಿಗಳು ಮುಳ್ಳುಗಳು ತಮ್ಮ ಪಾದ ಮತ್ತು ಕಾಲುಗಳಿಗೆ ಚುಚ್ಚದಂತೆ ಅವುಗಳನ್ನು ದಾಟಿಕೊಂಡು ಹೋಗುತ್ತಾರೆ. ಆದರೆ ಒಬ್ಬ ವಿದ್ಯಾರ್ಥಿ ಮಾತ್ರ ದಾರಿಯಲ್ಲಿ ಬಿದ್ದಿರುವ ಮುಳ್ಳುಗಳನ್ನು ಒಂದೊಂದಾಗಿ ಎತ್ತಿ ಪಕ್ಕದ ಪೊದೆಯಲ್ಲಿ ಎಸೆಯತೊಡಗುತ್ತಾನೆ.
ಮೊದಲಿನ ಇಬ್ಬರೂ ವಿದ್ಯಾರ್ಥಿಗಳು, “ಅದೇನು ಮಾಡುತ್ತ ಕುಳಿತುಕೊಂಡಿರುವೆ, ಉದ್ಯೋಗವಿಲ್ಲದ ಬಡಿಗನ ಹಾಗೆ? ಸೂರ್ಯಾಸ್ತವಾಗುತ್ತಿದೆ. ಬೇಗನೇ ಹೊರಟು ಬಾ” ಎಂದು ಮೂರನೆಯ ವಿದ್ಯಾರ್ಥಿಯನ್ನು ಒತ್ತಾಯಿಸುತ್ತಾರೆ.
ಮೂರನೆಯ ವಿದ್ಯಾರ್ಥಿ ಹೇಳುತ್ತಾನೆ, “ನಿಮಗೆ ಅವಸರವಿದ್ದರೆ ನೀವು ಹೊರಡಿ. ನಾನು ದಾರಿಯಲ್ಲಿ ಬಿದ್ದಿರುವ ಮುಳ್ಳುಗಳನ್ನೆಲ್ಲ ಆಯ್ದು ಪಕ್ಕಕ್ಕೆ ಎಸೆದೇ ಬರುವುದು!! ನಮಗಾದರೋ, ಇನ್ನೂ ಬೆಳಕು ಇರುವುದರಿಂದ ದಾರಿಯಲ್ಲಿ ಬಿದ್ದಿರುವ ಮುಳ್ಳುಗಳು ಕಂಡಿವೆ. ಆದರೆ ನಮ್ಮ ನಂತರ ಬರುವ ಜನಗಳಿಗೆ ತೊಂದರೆಯಾಗುತ್ತದೆ. ಕತ್ತಲೆಯಾಗುತ್ತಿದೆ. ಕತ್ತಲೆಯಲ್ಲಿ ನಡೆದುಬರುವ ಜನಗಳಿಗೆ ದಾರಿಯಲ್ಲಿ ಬಿದ್ದಿರುವ ಮುಳ್ಳುಗಳು ಚುಚ್ಚುತ್ತವೆ.
ಅವರಿಗೆ ತೊಂದರೆಯಾಗುತ್ತದೆ. ಬೇರೆಯವರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ನಮ್ಮ ಧರ್ಮ” ಎಂದು.
ಈ ರೀತಿಯಾಗಿ ಆತ ಸ್ನೇಹಿತರಿಗೆ ಹೇಳಿಬಿಟ್ಟು ದಾರಿಯಲ್ಲಿ ಬಿದ್ದ ಮುಳ್ಳುಗಳನ್ನು ಎತ್ತಿ ಪಕ್ಕಕ್ಕೆ ಹಾಕುವ ಕಾರ್ಯದಲ್ಲಿ ವ್ಯಸ್ತವಾಗುತ್ತಾನೆ. ಇದನ್ನೆಲ್ಲ ಪೊದೆಯಲ್ಲಿ ಅಡಗಿ ಕುಳಿತುಕೊಂಡ ಗುರುಗಳು ಗಮನಿಸಿಕೊಂಡಿರುತ್ತಾರೆ. ಅವರು ಆ ಕೂಡಲೇ ಪೊದೆಯಿಂದ ಎದ್ದು ಆಚೆ ಬರುತ್ತಾರೆ.
ಕುಲಪತಿಗಳು, ಮೊದಲಿನ ಇಬ್ಬರು ವಿದ್ಯಾರ್ಥಿಗಳನ್ನು ಕುರಿತು ಹೇಳುತ್ತಾರೆ, “ನಿಮ್ಮ ಶಿಕ್ಷಣ ಇನ್ನೂ ಮುಗಿದಿಲ್ಲ. ನೀವು ಇನ್ನೂ ಒಂದಷ್ಟು ವರುಷಗಳವರೆಗೆ ವಿಶ್ವವಿದ್ಯಾಲಯದ ಪರಿಸರದಲ್ಲಿಯೇ ಇರಬೇಕಾಗುತ್ತದೆ.
ಈ ಮೂರನೆಯ ವಿದ್ಯಾರ್ಥಿ ಮಾತ್ರ ಶಿಕ್ಷಣವನ್ನು ಪೂರೈಸಿದ್ದಾನೆ. ವಿದ್ಯಾವಂತ ಪದವಿಗೆ ಇವನು ಮಾತ್ರ ಅರ್ಹ. ಇವನು ಸಮತ್ವವನ್ನು ಸಾಧಿಸಿದ್ದಾನೆ.
ವಿಶ್ವವಿದ್ಯಾಲಯದ ದೃಷ್ಟಿಯಲ್ಲಿ ವಿದ್ಯೆ ಎಂದರೆ ಬರೀ ಪಾಂಡಿತ್ಯವಲ್ಲ, ಪದವಿಯಲ್ಲ. ವಿದ್ಯೆ ಎಂದರೆ ಅದು, ಪ್ರೀತಿ, ಪ್ರೇಮ, ವಾತ್ಸಲ್ಯ. ವಿದ್ಯೆ ಎಂದರೆ ಸಹಾನುಭೂತಿ ಮತ್ತು ಸಮಾನುಭೂತಿ. ನೀವು ಪಂಡಿತರೇನೋ ಆಗಿದ್ದೀರಿ. ಆದರೆ ನಿಮ್ಮಲ್ಲಿ ಪ್ರೇಮವಿಲ್ಲ. ನೀವೂ ಇನ್ನೂ ಪಕ್ವವಾಗಬೇಕು, ಮಾಗಬೇಕು. ಬೇರೆಯವರ ದುಃಖ, ದುಮ್ಮಾನ,
ಕಷ್ಟ, ಸಂಕಷ್ಟಗಳಿಗೆ ಸ್ಪಂದಿಸುವವನೇ ನಿಜವಾದ ವಿದ್ಯಾವಂತ.
ಬರೀ “ಆನು, ತಾನು, ತನ್ನದು, ತಾನೇ” ಎಂದಂದುಕೊಂಡಿರುವವನು ವಿದ್ಯಾವಂತನಲ್ಲ. ಅವನು ಬರೀ ಡಿಗ್ರಿವಂತ. ಆತನಿಂದ ಲೋಕಕಲ್ಯಾಣ ಕಾರ್ಯ ಆಗುವುದಿಲ್ಲ. ವಿಶ್ವವಿದ್ಯಾಲಯದ ಅಂತಿಮ ಪರೀಕ್ಷೆಯಲ್ಲಿ ಮೂರನೆಯ ವಿದ್ಯಾರ್ಥಿ ಮಾತ್ರ ಉತ್ತೀರ್ಣನಾಗಿದ್ದಾನೆ. ನೀವು ಅನುತ್ತೀರ್ಣರಾಗಿರುವಿರಿ. ನೀವು ಮಾಗುವುದಕ್ಕೆ, ಬಾಗುವುದಕ್ಕೆ ಇನ್ನಷ್ಟು ವರುಷಗಳವರೆಗೆ ವಿಶ್ವವಿದ್ಯಾಲಯದಲ್ಲಿಯೇ ಇರಬೇಕಾಗುತ್ತದೆ” ಎಂದು.
ವಿದ್ಯೆ ಎಂದರೆ ಪದ, ಪಟ್ಟ, ಪ್ರಶಸ್ತಿ, ಪಾಂಡಿತ್ಯವಲ್ಲ; ಅದು ಪ್ರೀತಿ, ವಾತ್ಸಲ್ಯ ಮತ್ತು ಹೃದಯವಂತಿಕೆ. ಇದನ್ನು ನಮ್ಮ ವಿದ್ಯಾವಂತ ಜನಗಳು ಅರ್ಥಮಾಡಿಕೊಳ್ಳಬೇಕಿದೆ.
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತುಮಕೂರು
.........
Good Morning
3rd July 2018 @  3608, Asbury Ln. Plano
Texas 75025 - 3888 U S A

- ಅರಿವು ಎಂದರೆ ....  ???
ಅರಿವು ಎಂದರೆ ವಿವೇಕ; ಅರಿವು ಎಂದರೆ ವಿವೇಚನೆ. 
ಅರಿವು ಎಂದರೆ ವಿಸ್ತಾರ; ಅರಿವು ಎಂದರೆ ಆತ್ಮಾವಲೋಕನ.
ಅರಿವು ಎಂದರೆ ಜಿಜ್ಞಾಸೆ; ಅರಿವು ಎಂದರೆ ಕುತೂಹಲ.
ಅರಿವು ಎಂದರೆ ಆತ್ಮವಿಶ್ವಾಸ.
 ಅರಿವು ಎಂದರೆ ಅನುಸಂಧಾನ; ಅರಿವು ಎಂದರೆ ಸಮಾಧಾನ.
ಅರಿವು ಎಂದರೆ ಸಂಸ್ಕಾರ; ಅರಿವು ಎಂದರೆ ಆಚಾರ. 
ಅರಿವು ಎಂದರೆ ಸದಾಚಾರ; ಅರಿವು ಎಂದರೆ ಸುವಿಚಾರ. 
ಅರಿವು ಎಂದರೆ ಅನುಭವ; ಅರಿವು ಎಂದರೆ ಅನುಭಾವ.
ಅರಿವು ಎಂದರೆ ಅನುಭೂತಿ; ಅರಿವು ಎಂದರೆ ಅಭಿವ್ಯಕ್ತಿ.
ಸಮಾನುಭೂತಿ; ಅರಿವು ಎಂದರೆ ವಿನಿಮಯ. 
ಅರಿವು ಎಂದರೆ ಶಿಸ್ತು; ಅರಿವು ಎಂದರೆ ಸಂಯಮ.
ಅರಿವು ಎಂದರೆ ಸಮಯ; ಅರಿವು ಎಂದರೆ ವಿಸ್ಮಯ.
ಅರಿವು ಎಂದರೆ ಅಧ್ಯಯನ; ಅರಿವು ಎಂದರೆ ಅನುಸಂಧಾನ.
ಅರಿವು ಎಂದರೆ ಆದಾನ-ಪ್ರದಾನ; ಅರಿವು ಎಂದರೆ ವಿಧಾನ-ಪ್ರವಿಧಾನ.
 ಅರಿವು ಎಂದರೆ ಆತ್ಮಜ್ಞಾನ; ಅರಿವು ಎಂದರೆ ಅಕ್ಷಯಜ್ಞಾನ.
ಅರಿವು ಎಂದರೆ ಆತ್ಮಗಮನ; ಅರಿವು ಎಂದರೆ ಅಭಿಮಾನದಮನ.
 ಅರಿವು ಎಂದರೆ ಸದ್ಭಾವ; ಅರಿವು ಎಂದರೆ ಸಜ್ಜನಸಂಗ.
ಅರಿವು ಎಂದರೆ ಸತ್ಸಂಗ; ಅರಿವು ಎಂದರೆ ವ್ಯಾಸಂಗ.
ಅರಿವು ಎಂದರೆ ಪ್ರಕೃತಿ; ಅರಿವು ಎಂದರೆ ಸತ್ಕೃತಿ.
ಅರಿವು ಎಂದರೆ ಸಂಸ್ಕೃತಿ; ಅರಿವು ಎಂದರೆ ಜಾಗೃತಿ.
ಅರಿವು ಎಂದರೆ ಸಹನಾವವತು; ಅರಿವು ಎಂದರೆ ಸಹ ನೌ ಭುನಕ್ತು.
ಅರಿವು ಎಂದರೆ ಸದ್ಬುದ್ಧಿ; ಅರಿವು ಎಂದರೆ ಸಮಚಿತ್ತ.
ಅರಿವು ಎಂದರೆ ಎಚ್ಚರ; ಅರಿವು ಎಂದರೆ ಎಚ್ಚರಿಕೆ.
ಅರಿವು ಎಂದರೆ ಆವಿಷ್ಕಾರ; ಅರಿವು ಎಂದರೆ ಸದಸದ್ವಿವೇಕ.
 ಅರಿವು ಎಂದರೆ ದೃಢನಿಶ್ಚಯ; ಅರಿವು ಎಂದರೆ ಅಚಲನಿಷ್ಠೆ. 
ಅರಿವು ಎಂದರೆ “ಮಹ್ಯಮ್, ಮೇ” ಹನನ; 
ಅರಿವು ಎಂದರೆ “ತುಭ್ಯಮ್, ತೇ” ಸ್ತವನ. 
ಅರಿವು ಎಂದರೆ ಸದಾಚಾರ; ಅರಿವು ಎಂದರೆ ಸುವಿಚಾರ.
ಅರಿವು ಎಂದರೆ ಸಮರ್ಪಣ; ಅರಿವು ಎಂದರೆ ಸರ್ವಾರ್ಪಣ. 
ಅರಿವು ಎಂದರೆ ಅನಂತ; ಅರಿವು ಎಂದರೆ ಅಕ್ಷರ.
ಅರಿವು ಎಂದರೆ “ಥರ್ಡ್ ಐ”; ಅರಿವು ಎಂದರೆ “ಥರ್ಡ್ ಅಂಪೈರ್”.
ಅರಿವು ಎಂದರೆ “ಆಲ್ ದಿ ಬೆಸ್ಟ್”. 
ಅರಿವು ಎಂದರೆ “ಆಲ್ ಈಜ್ ವೆಲ್”.
ಡಾ. ಶ್ರೀ ಶಿವಾನಂದ ಶಿವಾಚಾರ್ಯರು
ಹಿರೇಮಠ, ತುಮಕೂರು
... .................
Good Evening
20th June 2018 @ Hiremath, Tumkur
``ಹೇಡಿಗಳ ಕೈಯಲ್ಲಿ ವೇದಾಂತ ಸಿಕ್ಕರೆ 
ವೇದಾಂತ ಕೂಡ ಹೇಡಿಯಾಗುತ್ತದೆ'' - ”  
ಡಾ. ಶ್ರೀ ಶಿವಾನಂದ ಶಿವಾಚಾರ್ಯರು
“ಅಲ್ಲಿರುವುದು ನಮ್ಮನೆ, ಇಲ್ಲಿರುವುದು ಸುಮ್ಮನೆ” 
ಎಂದು ದಾಸರು ಹೇಳಿದ್ದಾರೆಂದು
ನೀವು ಸುಮ್ಮನೆ ಕುಳಿತುಕೊಳ್ಳುವುದಕ್ಕೆ ಹೋಗಬೇಡಿ.
ನಿಮ್ಮ ಜವಾಬ್ದಾರಿಯಿಂದ ಕಳಚಿಕೊಳ್ಳಬೇಡಿ 
ಮತ್ತು ನಿಮ್ಮ ಜವಾಬ್ದಾರಿಯನ್ನು 
ಕೊಡವಿಕೊಳ್ಳಬೇಡಿ.
ನೀವಿರುವ ಈ ಮನೆಯನ್ನು 
ಮಹಾಮನೆಯನ್ನಾಗಿಸುವ 
ಬಹುದೊಡ್ಡ ಜವಾಬ್ದಾರಿ ನಿಮ್ಮಗಳ ಹೆಗಲ ಮೇಲಿದೆ. 
ವೇದಾಂತವನ್ನು ಹೇಳಿಬಿಟ್ಟು 
ಬಚಾವಾಗುವುದಕ್ಕೆ ನೋಡಬೇಡಿ. 
ನಮ್ಮ ದೇಶದಲ್ಲಿ ಬಹುಪಾಲು ಜನಗಳು 
ವೇದಾಂತವನ್ನು ಮತ್ತು ಅಧ್ಯಾತ್ಮವನ್ನು 
ಪಲಾಯನಕ್ಕಾಗಿ ಬಳಸಿಕೊಂಡಿದ್ದಾರೆ. 
ಎಲ್ಲಕ್ಕೂ ಆಕಾಶವನ್ನು ನೋಡುತ್ತ ಮೇಲೆ 
ಕೈ ತೋರಿಸಿಕೊಂಡಿರುತ್ತಾರೆ. 
ನಮ್ಮ ಉದ್ಧಾರಕ್ಕಾಗಿ ದೇವರು 
ಅದೆಲ್ಲೋ ಮೇಲಿನಿಂದ ಇಳಿದುಬರುತ್ತಾನೆಂದು 
ಆಕಾಶವನ್ನು ನೋಡುತ್ತ ಕುಳಿತುಕೊಳ್ಳುವುದು ಸರಿಯಲ್ಲ. 
ನಾವು ವೇದಾಂತವನ್ನು ಹೇಳುತ್ತ 
ಸೋಂಬೇರಿಗಳಾಗುತ್ತಿದ್ದೇವೆ. 
ಇದು ಕೂಡದು. 
ನಾವು ವೇದಾಂತವನ್ನು ಹೇಳುತ್ತ ಸಾಹಸಿಗಳಾಗಬೇಕು. 
ವೇದಾಂತವಿದು ಹೇಡಿಗಳ ಕೈಗೆ ಸಿಕ್ಕರೆ 
ಅವರು ವೇದಾಂತವನ್ನು ಕೂಡ ಹೇಡಿಯಾಗಿಸುತ್ತಾರೆ. 
ಅದು ಹೇಡಿಯ ಕೈಯಲ್ಲಿ ಚಂದ್ರಾಯುಧ 
ಕೊಟ್ಟಂತೆ ಆಗುತ್ತದೆ. 
ಕ್ಷಣಿಕವಾದ ಈ ಬದುಕಿನ ಸಂಪೂರ್ಣವಾದ 
ಲಾಭವನ್ನು ಪಡೆದು 
ಶಾಶ್ವತವಾಗಿ ಉಳಿಯಲು ವೇದಾಂತವು 
ನಮ್ಮನ್ನು ಪ್ರೇರೇಪಿಸುತ್ತದೆ.
“ಹೇಗಾದರೂ ಒಂದು ದಿನ ಸಾಯುವುದು ಇದ್ದೇ ಇದೆ” 
ಎಂದು ಊಟ ಮಾಡದೆ ಕೈಕಟ್ಟಿ ಕುಳಿತುಕೊಂಡರೆ 
ಮನುಷ್ಯ ಇವತ್ತೇ ಸತ್ತುಹೋಗುತ್ತಾನೆ. 
ವೇದಾಂತವಿದು ನಮಗೆ ಮೋಹ, 
ವ್ಯಾಮೋಹಗಳನ್ನು ಕಳೆದುಹಾಕಲು ಹೇಳುತ್ತದೆ. 
ಬರೀ ಒಣ ವೇದಾಂತವನ್ನು ಹೇಳಿಕೊಂಡು 
ಭಜನೆ ಮಾಡುತ್ತ ಕುಳಿತುಕೊಂಡಿದ್ದರಿಂದಲೇ 
ಈ ದೇಶ ಹತ್ತು ಹಲವು ಬಾರಿ ಹಲವಾರು 
ಜನಗಳಿಂದ 
ದಾಳಿ, ಹಲ್ಲೆಗಳಿಗೆ ಒಳಗಾಗಬೇಕಾಗಿ ಬಂತು. 
ಇಲ್ಲಿಯ ಜನಗಳು ಪರಕೀಯರ ದಾಳಿ 
ಮತ್ತು ಹಾವಳಿಯಿಂದ 
ದಿನದಿನವೂ ಸತ್ತು ಬದುಕಿದ್ದಾರೆ. 
ಈ ದೇಶದಲ್ಲಿ ನಾವು ನಂಬಿದ 
ಅಹಿಂಸಾತತ್ತ್ವ ಮತ್ತು ಶಾಂತಿಪಾಠದಿಂದಲೇ 
ನಾವು-ನೀವುಗಳು ಹೆಚ್ಚು ಹೆಚ್ಚು ಕಷ್ಟ-ನೋವುಗಳಿಗೆ 
ಸಿಲುಕುವಂತಾಯಿತು. 
ನಮ್ಮ ದೇಶದ ಜನಗಳು ಒಣವೇದಾಂತವನ್ನು 
ಹೇಳುವುದನ್ನು ನಿಲ್ಲಿಸಬೇಕು. 
ನಾವು ನಮ್ಮ ಜನಗಳಿಗೆ ವೀರ ವೇದಾಂತದ 
ಪಾಠಮಾಡಬೇಕು. 
ಜನಗಳಲ್ಲಿ ನಾವು, 
“ಹತ್ವಾ ತು ಲಭತೇ ಸ್ವರ್ಗಂ, ಜಿತ್ವಾ ತು ಲಭತೇ ಯಶಃ” - 
ಎಂದು ಎದೆ ಎತ್ತಿ ಹೇಳುವಂಥ ಕೆಚ್ಚನ್ನು ತುಂಬಬೇಕು.
“ಸತ್ತರೆ ನನಗೆ ವೀರಸ್ವರ್ಗ; ಗೆದ್ದರೆ ನಾನು 
ಭೂಮಿಯನ್ನೇ ಸ್ವರ್ಗಮಾಡುತ್ತೇನೆ” ಎಂದು 
ಪ್ರತಿಯೊಬ್ಬರೂ ಕತ್ತೆತ್ತಿ ಹೇಳುವಂತಾಗಬೇಕು. 
ಹಾಗೆ ನಾವುಗಳು ಜನಗಳಲ್ಲಿ ಶಕ್ತಿ, ಸತ್ತ್ವ, 
ಸಾಹಸಗಳನ್ನು ತುಂಬಬೇಕು.
......
19th June 2018  @ Hiremath, Tumkur
ಅಧ್ಯಾತ್ಮವೆಂದರೆ ಗಿಳಿಪಾಠವಲ್ಲ; ಅದು ಗೃಹಪಾಠ
ರಶಿಯಾ ದೇಶದ ಜನಿಸಿದ ಮೇಡಮ್ ಬ್ಲೈವಟ್‌ಸ್ಕಿಯವರಿಗೆ
 ಥಿಯಾಸಾಫಿಕಲ್ ಜಗತ್ತಿನಲ್ಲಿ ಬಹುದೊಡ್ಡ ಹೆಸರಿದೆ. 
ಥಿಯಾಸಾಫಿಕಲ್ ಸೊಸೈಟಿಯ ಸ್ಥಾಪನೆಯಲ್ಲಿ 
ಬ್ಲೈವಟ್‌ಸ್ಕಿಯವರ ಹೆಸರು ಮುಂಚೂಣಿಯಲ್ಲಿದೆ. 
1831ರಲ್ಲಿ ಬ್ಲೈವಟ್‌ಸ್ಕಿ ರಶಿಯಾ ದೇಶದ 
ಒಂದು ದೊಡ್ಡ ಶ್ರೀಮಂತ ಕುಟುಂಬದಲ್ಲಿ ಜನಿಸುತ್ತಾರೆ. 
ಆಗರ್ಭ ಶ್ರೀಮಂತೆಯಾದರೂ ಅವರಿಗೆ 
ಲೌಕಿಕ ಸುಖೋಪಭೋಗಗಳ ಕುರಿತು 
ಅಷ್ಟೊಂದು ಆಕರ್ಷಣೆ ಇರುವುದಿಲ್ಲ. 
ಅವರ ಒಲವು, ವಾತ್ಸಲ್ಯಗಳು 
ಅಲೌಕಿಕದತ್ತ ಮತ್ತು ಆಧ್ಯಾತ್ಮಿಕದತ್ತ ವಾಲಿಕೊಳ್ಳುತ್ತವೆ.
ಅವರಲ್ಲಿನ ಆಧ್ಯಾತ್ಮಿಕ ಆಕರ್ಷಣೆ ಅವರನ್ನು 
ಭಾರತಕ್ಕೆ ಕರೆತರುತ್ತದೆ. ಅವರು ಭಾರತದ 
ಆರ್ಷಜಗತ್ತಿನೊಂದಿಗೆ ಮತ್ತು ಆರ್ಷಸಾರಸ್ವತದೊಂದಿಗೆ 
ನಿಕಟ ಸಂಪರ್ಕವನ್ನು ಹೊಂದುತ್ತಾರೆ. 
ಆಸೆ, ಆಮಿಷ, ಆತುರಗಳ ಮಧ್ಯದಲ್ಲಿ ಸಿಕ್ಕಿ ಬಳಲುವ 
ಜನಗಳನ್ನು ಆತ್ಮಮುಖಿ ಮತ್ತು ಅಧ್ಯಾತ್ಮಮುಖಿ 
ಮಾಡಬೇಕೆಂಬ ಅದಮ್ಯ ಹಂಬಲವನ್ನು 
ಹೊಂದಿದ ಬ್ಲೈವಟ್‌ಸ್ಕಿಯವರು ಆ ಕಾರ್ಯವನ್ನು 
ಮಾಡುವುದಕ್ಕಾಗಿ ಪ್ರಪಂಚದಾದ್ಯಂತ ಸುತ್ತುತ್ತಾರೆ.
ಅದೊಂದು ಸಲ ಬ್ಲೈವಟ್‌ಸ್ಕಿಯವರು 
ಧರ್ಮಪ್ರಸಾರಕ್ಕೆಂದು ಅಮೇರಿಕಾ ದೇಶದ 
ನ್ಯೂಯಾರ್ಕ್ ನಗರಕ್ಕೆ ಹೊರಟಿರುತ್ತಾರೆ. 
ಹಡಗಿನಲ್ಲಿ ಅವರು ಪ್ರಯಾಣಿಸಬೇಕಿತ್ತು. 
ಆ ಕಾಲದಲ್ಲಿ ವಿಮಾನಯಾನಕ್ಕಿಂತ 
ಹಡಗುಯಾನವೇ ಹೆಚ್ಚು ಪ್ರಚಲಿತದಲ್ಲಿತ್ತು.
ಬ್ಲೈವಟ್‌ಸ್ಕಿಯವರು ಹಡಗುಪ್ರಯಾಣದ 
ಪ್ರಥಮ ದರ್ಜೆಯ ಟಿಕೆಟ್‌ನ್ನು ಖರೀದಿಸಿರುತ್ತಾರೆ. 
ಬ್ಲೈವಟ್‌ಸ್ಕಿ ಹಡಗು ಬಂದರಕ್ಕೆ ಬರುತ್ತಾರೆ. 
ಬಂದರು ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿಕೊಂಡಿದೆ. 
ಬ್ಲೈವಟ್‌ಸ್ಕಿಯವರು ಪ್ರಥಮ ದರ್ಜೆಯ ಟಿಕೆಟ್‌ನ್ನು 
ಕೈಯಲ್ಲಿ ಹಿಡಿದುಕೊಂಡು ಹಡಗಿನೆಡೆಗೆ ಹೊರಟಿರುತ್ತಾರೆ. 
ಬಂದರಿನಲ್ಲಿ ಅವರಿಗೆ ಓರ್ವ ಮಹಿಳೆ
 ಅಳುತ್ತ ನಿಂತುಕೊಂಡಿರುವುದು ಕಣ್ಣಿಗೆ ಬೀಳುತ್ತದೆ. 
ಮಹಿಳೆಯ ಜೊತೆಯಲ್ಲಿ ಎರಡು ಪುಟ್ಟ ಮಕ್ಕಳಿವೆ.
ಮಹಿಳೆಯಾಕೆ ಮಕ್ಕಳನ್ನು ತಬ್ಬಿಕೊಂಡು ರೋದಿಸುತ್ತಿದ್ದಾಳೆ. 
ಅಳುತ್ತಿರುವ ಮಹಿಳೆಯನ್ನು ಕಂಡು ಬ್ಲೈವಟ್‌ಸ್ಕೀಯವರು 
ಆಕೆಯ ಬಳಿ ಬಂದು ಸಾಂತ್ವನದ ಧ್ವನಿಯಲ್ಲಿ, 
“ಅದೇಕಮ್ಮಾ ಅಳುತ್ತಿರುವೆ, ಏನಾಯಿತು?” ಎಂದು 
ಕೇಳುತ್ತಾರೆ.
ಮಹಿಳೆಯಾಕೆ ಹತಾಶೆಯ ಧ್ವನಿಯಲ್ಲಿ 
 “ಅಮ್ಮಾ, ನನ್ನ ಗಂಡ ಅಮೇರಿಕೆಯಲ್ಲಿ ಯಾವುದೋ 
ಒಂದು ಚಿಕ್ಕಪುಟ್ಟ ಕೆಲಸವನ್ನು ಮಾಡಿಕೊಂಡಿದ್ದಾನೆ. 
ಆತ ನನ್ನನ್ನು ಮತ್ತು ಮಕ್ಕಳನ್ನು ಅಮೇರಿಕಾಕ್ಕೆ 
ಕರೆಯಿಸಿಕೊಳ್ಳಲೆಂದು ದುಡ್ಡನ್ನು ಕಳುಹಿಸಿದ್ದ.
 ಹಡಗಿನ ಟಿಕೆಟ್‌ಗಳನ್ನು “ಬುಕ್” ಮಾಡಿಕೊಡುವ 
ಎಜೆಂಟ್‌ನೊಬ್ಬ ಅಮೇರಿಕಾಕ್ಕೆ ಹೋಗುವುದಕ್ಕೆ 
ಟಿಕೆಟ್ ಮಾಡಿಸಿಕೊಡುತ್ತೇನೆ ಎಂದು ಹೇಳಿ 
ನನಗೆ ನಕಲಿ ಟಿಕೆಟ್ ಕೊಟ್ಟು ಮೋಸಮಾಡಿದ್ದಾನೆ. 
ನಾನು ಇಲ್ಲಿ ಬಂದಾಗಲೇ ನಮಗೆ 
ನಕಲಿ ಟಿಕೆಟ್‌ನ ಅಸಲಿ ವಿಷಯ ಗೊತ್ತಾಯಿತು. 
ನಾನು ಮೋಸಹೋಗಿದ್ದೇನೆ. 
ಇಲ್ಲಿ ಬಂದು ಹುಡುಕಿದರೆ ಆತ ಎಲ್ಲಿಯೂ ಕಾಣುತ್ತಿಲ್ಲ. 
ನಾವು ಬಡವರು. ನನ್ನ ಗಂಡ ಕಳುಹಿಸಿದ 
ಹಣದಲ್ಲಿ ನನಗೆ ಹಾಗೂ ನನ್ನ ಮಕ್ಕಳಿಗೆ 
ಸಾಮಾನ್ಯ ಶ್ರೇಣಿಯ ಟಿಕೆಟ್‌ನ್ನು ಪಡೆದುಕೊಂಡಿದ್ದೆ. 
ನಾವು ಬಡವರು. ಮತ್ತೊಮ್ಮೆ ಟಿಕೆಟ್ 
ಕೊಂಡುಕೊಳ್ಳುವಷ್ಟು ದುಡ್ಡು ನನ್ನಲ್ಲಿ ಇಲ್ಲ. 
ನಾನೀಗ ಏನು ಮಾಡಲಿ? ನನಗೇನೂ ತೋಚುತ್ತಿಲ್ಲ”
ಎಂದು ದಳದಳನೇ ಕಣ್ಣೀರು ಸುರಿಸತೊಡಗಿದಳು. 
ಮಹಿಳೆಯ ಅತಂತ್ರ ಮತ್ತು ಅಸಹಾಯಕ 
ಸ್ಥಿತಿಯನ್ನು ಕಂಡು ಕರುಣಾಮಯಿ 
ಬ್ಲೈವಟ್‌ಸ್ಕಿಯವರ ಹೃದಯ ಕರಗುತ್ತದೆ. 
ಅವರು ಆ ಹೆಣ್ಣುಮಗಳ ಪರಿಸ್ಥಿತಿಯನ್ನು ಕಂಡು 
ಆರ್ದ್ರವಾಗುತ್ತಾರೆ. ಮರುಕ್ಷಣವೇ ಅವರೊಂದು 
ತೀರ್ಮಾನವನ್ನು ತೆಗೆದುಕೊಂಡು 
ಮಹಿಳೆಗೆ ಹೇಳುತ್ತಾರೆ, 
“ತಂಗಿ, ನೀನು ಅಳಬೇಡ. ಏನಾದರೂ 
ವ್ಯವಸ್ಥೆ ಮಾಡುವಾ. ನನ್ನ ಜೊತೆಗೆ ಬಾ” ಎಂದು 
ಹೇಳಿ ಆ ಮಹಿಳೆ ಮತ್ತು ಅವಳ ಮಕ್ಕಳನ್ನು
 ಕರೆದುಕೊಂಡು ತಮಗೆ ಪ್ರಥಮ ದರ್ಜೆಯ 
ಟಿಕೆಟ್‌ನ್ನು ಮಾಡಿಕೊಟ್ಟ ಹಡಗಿನ ಎಜೆಂಟ್‌ನ 
ಬಳಿಗೆ ಹೋಗುತ್ತಾರೆ. 
ಅವರು ಆತನಿಗೆ ಸನ್ನಿವೇಶವನ್ನು ವಿವರಿಸುತ್ತಾರೆ. 
ಅವರು ಎಜೆಂಟ್‌ನಿಗೆ ತಮ್ಮಲ್ಲಿರುವ 
ಪ್ರಥಮ ದರ್ಜೆಯ ಟಿಕೆಟ್‌ನ್ನು ಬದಲಾಯಿಸಿಬಿಟ್ಟು 
ಸಾಮಾನ್ಯ ದರ್ಜೆಯ ನಾಲ್ಕು ಟಿಕೆಟ್‌ಗಳನ್ನು 
ಕೊಡಲು ವಿನಂತಿಸಿಕೊಳ್ಳುತ್ತಾರೆ. 
ಎಜೆಂಟ್ ಆತ ಒಳ್ಳೆಯವ. 
ಆತ ಬ್ಲೈವಟ್‌ಸ್ಕಿಯವರ ಪ್ರಥಮ ದರ್ಜೆಯ 
ಟಿಕೆಟ್‌ಗೆ ಬದಲಾಗಿ ಅವರಿಗೆ ಸಾಮಾನ್ಯ ಶ್ರೇಣಿಯ 
ನಾಲ್ಕು ಟಿಕೆಟ್‌ಗಳನ್ನು ಕೊಡುತ್ತಾನೆ. 
ಬ್ಲೈವಟ್‌ಸ್ಕಿಯವರು ಅವನಿಗೊಂದು ದೊಡ್ಡ 
“ಥ್ಯಾಂಕ್ಸ್” ಹೇಳಿ ಮಹಿಳೆ ಮತ್ತು ಆಕೆಯ ಮಕ್ಕಳನ್ನು 
ಕರೆದುಕೊಂಡು ಹಡಗನ್ನೇರುತ್ತಾರೆ.
ಸಾಮಾನ್ಯ ದರ್ಜೆಯಲ್ಲಿರುವವರೆಲ್ಲ 
ಸಾಮಾನ್ಯವಾಗಿ ಸಾಧಾರಣ ಜನಗಳೇ. 
ಅಲ್ಲಿ ಅನುಕೂಲತೆಗಳು ಕೂಡ ಕಡಿಮೆ.  
ಪ್ರಯಾಣಿಕರು ಜಾಸ್ತಿ. ಯಾವಾಗಲೂ 
ಮೊದಲ ದರ್ಜೆಯಲ್ಲಿಯೇ ಪ್ರಯಾಣಮಾಡಿ 
ಅಭ್ಯಾಸವಿದ್ದ ಬ್ಲೈವಟ್‌ಸ್ಕೀಯವರಿಗೆ 
ಸಾಮಾನ್ಯ ದರ್ಜೆಯಲ್ಲಿ ಪ್ರಯಾಣ 
ಮಾಡುವುದು ತುಂಬ ಕಷ್ಟವೆನಿಸುತ್ತದೆ. 
ಆದರೂ ಆ ಮಹಿಳೆಗಾಗಿ ಅವರು 
ಕಷ್ಟವನ್ನು ಸಹಿಸಿಕೊಳ್ಳುತ್ತಾರೆ. 
ಅವರು ಆ ಮಹಿಳೆಯ ಜೊತೆಯಲ್ಲಿ 
ನ್ಯೂಯಾರ್ಕ್‌ವರೆಗೆ ನಿಂತುಕೊಂಡೇ 
ಪ್ರಯಾಣಮಾಡುತ್ತಾರೆ. 
ನ್ಯೂಯಾರ್ಕ್ ತಲುಪುತ್ತಲೇ ತನ್ನ ಗಂಡನನ್ನು 
ಸೇರಿಕೊಂಡ ಮಹಿಳೆ ಬ್ಲೈವಟ್‌ಸ್ಕಿಯವರ ಮೇಲೆ 
ಕೃತಜ್ಞತೆಯ ಮಹಾಪೂರವನ್ನೇ ಹರಿಸುತ್ತಾಳೆ. 
ಅಧ್ಯಾತ್ಮವೆಂದರೆ ಬರೀ ಮಾತಲ್ಲ. 
ಅಧ್ಯಾತ್ಮ ಎಂದರೆ ಆಚರಣೆ. 
ಅಧ್ಯಾತ್ಮ ಎಂದರೆ ಕೃತಿ. 
ಅಧ್ಯಾತ್ಮವೆಂದರೆ ಪರರ ದುಃಖದಲ್ಲಿ 
ಸಹಭಾಗಿಯಾಗುವುದು. 
ಅಧ್ಯಾತ್ಮವೆಂದರೆ ಸರ್ವರ ಸಂತೋಷಕ್ಕಾಗಿ 
ಅನುಕ್ಷಣವೂ, ಅನುದಿನವೂ
ಹಂಬಲಿಸಿಕೊಂಡಿರುವುದು. 
ಅಧ್ಯಾತ್ಮವೆಂದರೆ ಅದು ಗಿಳಿಪಾಠವಲ್ಲ. 
ಅಧ್ಯಾತ್ಮವೆಂದರೆ ಅದು ಗೃಹಪಾಠ. 
ಬ್ಲೈವಟ್‌ಸ್ಕಿಯಂಥ ಮಹಾಚೇತನಗಳು 
ಸಿಕ್ಕುವುದು ತುಂಬ ಅಪರೂಪ. 
“ದೈವಂ ಮಾನುಷರೂಪೇಣ” ಎಂಬುವುದಕ್ಕೆ 
ಬ್ಲೈವಟ್‌ಸ್ಕಿಯಂಥ  ಮಹಾನುಭಾವರು 
ಸಾಕ್ಷಿಯಾಗಿ ಮತ್ತು ಸಾಕ್ಷ್ಯಚಿತ್ರವಾಗಿ 
ನಿಂತುಕೊಳ್ಳುತ್ತಾರೆ. ಇಂಥ ಶಿಷ್ಟ ಹಾಗೂ 
ವಿಶಿಷ್ಟ ಚೇತನಗಳಿಗೆ ನಮ್ಮಗಳಿಂದ 
ಒಂದು ಹೃತ್ಪೂರ್ವಕ “ಜೈ ಹೋ” ಸಲ್ಲಲೇಬೇಕಲ್ಲವೆ? 
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತುಮಕೂರು
.......................................
Good Morning
16th June, 2018 @ Hiremath, Tumkur
ಧರ್ಮಪ್ರಸಾರ ಮತ್ತು ಧಾರ್ಮಿಕ ಪ್ರಚಾರಕ್ಕಾಗಿ 
ಒಂದು ತಿಂಗಳ ಕಾಲ ಅಮೇರಿಕಾ ದೇಶಕ್ಕೆ
ತುಮಕೂರು ಹಿರೇಮಠಾಧ್ಯಕ್ಷರಾದ 
ಡಾ. ಶ್ರೀ ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳವರ 
ಧಾರ್ಮಿಕ ಪ್ರಯಾಣ
ತುಮಕೂರು ಹಿರೇಮಠಾಧ್ಯಕ್ಷರಾದ 
ಡಾ. ಶ್ರೀ ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳು
ಒಂದು ತಿಂಗಳ ಕಾಲ ಅಮೇರಿಕಾಗೆ 
ಧಾರ್ಮಿಕ ಯಾತ್ರೆಯನ್ನು ಕೈಕೊಂಡಿದ್ದಾರೆ.
ಪರಮಪೂಜ್ಯ ಡಾ. ಶ್ರೀ ಶ್ರೀ ಶಿವಾನಂದ ಶಿವಾಚಾರ್ಯ 
ಮಹಾಸ್ವಾಮಿಗಳು 
ಜೂನ್ 21ರಂದು ಅಮೇರಿಕಾ ದೇಶಕ್ಕೆ 
ದಯಮಾಡಿಸಲಿದ್ದಾರೆ. 
ಧರ್ಮಪ್ರಸಾರ ಮತ್ತು ಧರ್ಮಪ್ರಚಾರಕ್ಕಾಗಿ 
ಅವರು ಅಮೇರಿಕಾದಲ್ಲಿ ಒಂದು ತಿಂಗಳ ಕಾಲ 
ಧಾರ್ಮಿಕ ಯಾತ್ರೆಯನ್ನು ಕೈಕೊಂಡಿದ್ದಾರೆ.
ದಿನಾಂಕ 2018, ಜೂನ್ 29, 30 ಜೂನ್‌ರಂದು 
ಅಮೇರಿಕೆಯ ಮಿಷಿಗನ್ ರಾಜ್ಯದ ಡೆಟ್ರಾಯಿಟ್‌ನ 
ಡಿಯರ್‌ಬಾರ್ನ್‌ನಲ್ಲಿ ನಡೆಯಲಿರುವ 
೪೧ನೆಯ ವೀರಶೈವ ಮಹಾಧಿವೇಶನದಲ್ಲಿ 
ಶ್ರೀ ಶ್ರೀಗಳವರು ಪಾಲ್ಗೊಳ್ಳಲಿದ್ದಾರೆ.
ಉತ್ತರ ಅಮೇರಿಕಾದ ಏಕೈಕ ಮತ್ತು ಬಲಿಷ್ಠ 
ಸಂಘಟನೆಯಾದ ವೀರಶೈವ ಸಮಾಜವು (ವ್ಹಿ. ಎಸ್. ಎನ್. ಎ.) 
ಅಧಿವೇಶನಕ್ಕೆ ಪೂಜ್ಯರನ್ನು ಮುಖ್ಯ ಅತಿಥಿಗಳಾಗಿ 
ಆಗಮಿಸಲು ಆಹ್ವಾನ ನೀಡಿದೆ.
ಅದೂ ಅಲ್ಲದೆ, ಪೂಜ್ಯರನ್ನು “ಕೀ ನೋಟ್ ಸ್ಪೀಕರ್” 
(ಪ್ರಧಾನ ಉಪನ್ಯಾಸಕ) ಆಗಿ “ಅರಿವೇ ಗುರು” 
ಈ ವಿಷಯದ ಕುರಿತು ಅಧಿಕೃತವಾದ ಉಪನ್ಯಾಸ 
ಹಾಗೂ ಧರ್ಮಸಂದೇಶವನ್ನು ನೀಡಲು 
ಸಮಾಜವು ಕೇಳಿಕೊಂಡಿದೆ. 
ಪರಮಪೂಜ್ಯ ಶ್ರೀ ಶ್ರೀಗಳು 
ವೀರಶೈವ ಮಹಾಧಿವೇಶನಕ್ಕೆ ಪೂರ್ವಭಾವಿಯಾಗಿ 
ಹತ್ತು ದಿನಗಳ ಕಾಲ 
ಆ ನಂತರ ಸುಮಾರು 20 ದಿನಗಳ ಕಾಲ ಅಮೇರಿಕಾದಲ್ಲಿದ್ದು 
ಅಮೇರಿಕೆಯ ಬೇರೆ ಬೇರೆ ರಾಜ್ಯಗಳಿಗೆ ಭೇಟಿಕೊಟ್ಟು 
ಅಲ್ಲಿ ವೀರಶೈವ ಧರ್ಮ ಮತ್ತು ನಮ್ಮೀ ಪರಮಪಾವನ 
ಹಿಂದೂ ಸಂಸ್ಕೃತಿಯ ಕುರಿತು 
ಅಲ್ಲಲ್ಲಿ ವಿವರವಾದ ಉಪನ್ಯಾಸಗಳನ್ನು ನೀಡಲಿದ್ದಾರೆ.
ಜೂನ್ 21ರಿಂದ ಜುಲೈ 24ರ ವರೆಗೆ 
ಅಮೇರಿಕಾದಲ್ಲಿರುವ 
ಪೂಜ್ಯರು ಚಿಕ್ಯಾಗೋ, ಡಲ್ಲಾಸ್, ಅಬಿಲಿನ್, 
ವಾಷಿಂಗ್‌ಟನ್ ಡಿ.ಸಿ., 
ಮೇರಿಲ್ಯಾಂಡ್, ವರ್ಜಿನಿಯಾ...., 
ಇತ್ಯಾದಿ ಪ್ರಾಂತ, ಪ್ರದೇಶಗಳಿಗೆ ಭೇಟಿಕೊಡಲಿದ್ದಾರೆ. 
ಇದೇ ಸಂದರ್ಭದಲ್ಲಿ ಪೂಜ್ಯರು ಭಕ್ತರ ಮನೆಯಲ್ಲಿ 
ಶಿವಪೂಜೆ, ರುದ್ರಾಭಿಷೇಕ, 
ಲಿಂಗಧಾರಣ, ನಾಮಕರಣ, ಸಾಮೂಹಿಕ ಪ್ರಾರ್ಥನೆ, 
ಧರ್ಮಗೋಷ್ಠಿ, ಪ್ರಶ್ನೋತ್ತರ, 
ಸಂವಾದ, ಮಹಾಮನೆ, ಅನುಭವಮಂಟಪ 
ಮತ್ತು ಅರಿವಿನಂಗಳ ಕಾರ್ಯಗಳನ್ನು 
ನಡೆಯಿಸಿಕೊಡಲಿದ್ದಾರೆ.
2018 ಜೂನ್ 20ರಂದು ಸಾಯಂಕಾಲ 
ತುಮಕೂರಿನ ಹಿರೇಮಠದಿಂದ ದಯಮಾಡಿಸಲಿರುವ 
ಶ್ರೀ ಶ್ರೀಗಳು ಜುಲೈ 24ರಂದು ಶ್ರೀಮಠಕ್ಕೆ ಆಗಮಿಸುತ್ತಾರೆ. 
ಅಮೇರಿಕೆಯಿಂದ ದಯಮಾಡಿಸಿದ ನಂತರ 
ಶ್ರೀಗಳು ಕಾರ್ಯಕ್ರಮಗಳಿಗೆ ಲಭ್ಯರಾಗುತ್ತಾರೆ
ಎಂದು ಶ್ರೀಮಠದ ವ್ಯವಸ್ಥಾಪಕರು 
ಪತ್ರಿಕಾ ಹೇಳಿಕೆಯನ್ನು ನೀಡಿದ್ದಾರೆ. 
ವ್ಯವಸ್ಥಾಪಕರು, ಹಿರೇಮಠ, ತುಮಕೂರು
........................
15th June 2018
@ Hiremath, Tumkur
“ಮನ್ ಕೀ ಬಾತ್” - ಕೇಳಿಸಿಕೊಳ್ಳುವುದಾಗಲಿ

ಅದೊಂದು ಪುಟ್ಟ ಹಳ್ಳಿ. ಅಲ್ಲಿಬ್ಬರು ಪುಟ್ಟ ಬಾಲಕರು. 
ಅಬ್ಬಬ್ಬ ಎಂದರೆ, ಒಬ್ಬನಿಗೆ ಹತ್ತು ವರುಷ. 
ಇನ್ನೊಬ್ಬನಿಗೆ ಏಳು ವರುಷ. ಇಬ್ಬರಲ್ಲೂ ತುಂಬ ದೋಸ್ತಿ. 
ಒಬ್ಬರನ್ನು ಬಿಟ್ಟು ಒಬ್ಬರು ಅಗಲುತ್ತಿರಲಿಲ್ಲ. 
ಯಾವಾಗಲೂ ಜೊತೆ ಜೊತೆಯಲ್ಲಿಯೇ ಇರುತ್ತಿದ್ದರು. 
ಆಟ, ಪಾಟ, ಊಟ, ಓಟ, ನೋಟ....., 
ಎಲ್ಲವೂ ಒಟ್ಟು ಒಟ್ಟಾಗಿಯೇ!!
ಅದೊಂದು ದಿನ ಪುಟ್ಟ ಸ್ನೇಹಿತರಿಬ್ಬರು ಆಡುತ್ತ, 
ಆಡುತ್ತ ಹಳ್ಳಿಯಿಂದ ಒಂದಷ್ಟು ದೂರ ಹೋಗುತ್ತಾರೆ. 
ಅಲ್ಲೊಂದು ಬಾವಿ. ಬಾಲಕರಿಬ್ಬರೂ ಬಾವಿಯ ಬಳಿ 
ಹೋಗುತ್ತಾರೆ. ಬಾವಿಯಲ್ಲಿ ಇಣುಕಿ ನೋಡುತ್ತಿರುವಾಗ 
ಹತ್ತು ವರುಷದ ಬಾಲಕ ಬಾವಿಯಲ್ಲಿ ಬಿದ್ದುಬಿಡುತ್ತಾನೆ. 
ಬಾವಿಯಲ್ಲಿ ಬಿದ್ದ ಬಾಲಕ ಭಯದಿಂದ ಕೂಗಿಕೊಳ್ಳತೊಡಗುತ್ತಾನೆ. 
ಬಾವಿಯ ಮೇಲಿರುವ ಬಾಲಕ ಗಾಬರಿಯಾಗುತ್ತಾನೆ. 
ಆತ ಸಹಾಯಕ್ಕಾಗಿ ಕೂಗಿಕೊಳ್ಳತೊಡಗುತ್ತಾನೆ. 
ಅದು ನಿರ್ಜನ ಪ್ರದೇಶವಾದ್ದರಿಂದ 
ಅಲ್ಲಿ ಜನಸಂಚಾರವಿರಲಿಲ್ಲ. 
ಬಾಲಕನ ಕೂಗು ಯಾರನ್ನೂ ತಲುಪಲಿಲ್ಲ. 
ಬಾಲಕನಿಗೆ ಏನು ಮಾಡಬೇಕೆಂದು ತೋಚುವುದಿಲ್ಲ. 
ಆತ ಸಾಕಷ್ಟು ಅತ್ತ, ಇತ್ತ ಮಾಡುತ್ತಾನೆ. 
ಏನೂ ಪ್ರಯೋಜನವಾಗುವುದಿಲ್ಲ. 
ಸ್ನೇಹಿತನನ್ನು ಹೇಗಾದರೂ ಸರಿ, 
“ಬಚಾವು” ಮಾಡಲೇಬೇಕೆಂದು 
ಬಾಲಕ ತೀರ್ಮಾನಿಸುತ್ತಾನೆ. ಆತನ ಕಣ್ಣಿಗೆ 
ಒಂದು ಹಗ್ಗ ಕಟ್ಟಿದ ಬಕೆಟ್ ಕಾಣಿಸುತ್ತದೆ. 
ಆತ ಬಕೆಟ್‌ನ್ನು ಬಾವಿಯಲ್ಲಿ ಬಿಡುತ್ತಾನೆ. 
ಗೆಳೆಯನಿಗೆ ಬಕೆಟ್ ಮತ್ತು ಹಗ್ಗವನ್ನು 
ಗಟ್ಟಿಯಾಗಿ ಹಿಡಿದುಕೊಳ್ಳಲು ಹೇಳಿ 
ಆತ ತಾನು ಮೇಲ್ಗಡೆಯಿಂದ ತನ್ನೆಲ್ಲ 
ಶಕ್ತಿ, ಸಾಹಸವನ್ನು ಒಟ್ಟೈಸಿ ಹಗ್ಗವನ್ನು ಹಿಡಿದು 
ಎಳೆಯತೊಡಗುತ್ತಾನೆ.
ಹತ್ತು ವರುಷದ ಬಾಲಕನನ್ನು ಏಳು ವರುಷದ 
ಬಾಲಕ ಬಾವಿಯಿಂದ ಎಳೆದು ಹೊರಗೆ ತರುವುದು 
ಅಷ್ಟೊಂದು ಸುಲಭವೆ? ಆದರೆ ಬಾಲಕ ಹಟವನ್ನು 
ಸಡಿಲಿಸಲಿಲ್ಲ. “ಮರಳಿ ಯತ್ನವ ಮಾಡು” ಎಂಬ 
ಮಾತಿನಂತೆ ಆತ ಮತ್ತೆ ಮತ್ತೆ ಯತ್ನವನ್ನು ಮಾಡಿದ. 
ಮೈಯ್ಯಲ್ಲಿ ದೆವ್ವ ಬಂದಂತೆ ಆತ ಹಗ್ಗವನ್ನು ಬಲವಾಗಿ
ಎಳೆಯತೊಡಗುತ್ತಾನೆ. 
ಕೊನೆಗೂ ಆತ ಹತ್ತು ವರುಷದ ತನ್ನ ಗೆಳೆಯನನ್ನು 
ಬಾವಿಯಿಂದ ಹೊರಗೆಳೆದು ತಂದು  “ಬಚಾವು” ಮಾಡುವಲ್ಲಿ 
ಯಶಸ್ವಿಯಾಗುತ್ತಾನೆ.
ಬಾಲಕರಿಬ್ಬರು ಹಳ್ಳಿಗೆ ಬರುತ್ತಾರೆ. 
ಬಾಲಕರು ಕಳೆದುಹೋದರೆಂದು ಗ್ರಾಮಸ್ಥರು 
ಗಾಬರಿಯಾಗಿರುತ್ತಾರೆ. ಮರಳಿಬಂದ ಬಾಲಕರನ್ನು 
ಕಂಡು ಅವರು ನಿಟ್ಟುಸಿರುಬಿಡುತ್ತಾರೆ. 
“ಅದೆಲ್ಲ ಹೋಗಿದ್ದಿರಿ?” ಎಂದು ಗ್ರಾಮಸ್ಥರು 
ಬಾಲಕರಿಗೆ ಜೋರುಮಾಡಿ ಕೇಳಿದಾಗ ಬಾಲಕರು 
ನಡೆದ ವೃತ್ತಾಂತವನ್ನೆಲ್ಲ ಹೇಳುತ್ತಾರೆ. 
ಆದರೆ ಬಾಲಕರು ಹೇಳಿದ ವಿಷಯವನ್ನು ಜನಗಳಿಗೆ 
ನಂಬಲಿಕ್ಕೆ ಆಗುತ್ತಿಲ್ಲ. ಏಳು ವರುಷದ ಬಾಲಕ 
ಹತ್ತು ವರುಷದ ಬಾಲಕನನ್ನು ಬಾವಿಯಿಂದ 
ಹೊರತೆಗೆಯುವುದೆಂದರೆ ಏನು? ಇದು ಸಾಧ್ಯವೇ? 
ಬಾಲಕರು ಸುಳ್ಳು ಹೇಳುತ್ತಿದ್ದಾರೆ ಎಂದು 
ಗ್ರಾಮಸ್ಥರು ಭಾವಿಸುತ್ತಾರೆ.

ಆದರೆ ಆ ಎಲ್ಲ ಜನಗಳ ಮಧ್ಯದಲ್ಲಿದ್ದ 
ಓರ್ವ ವಯೋವೃದ್ಧ ವ್ಯಕ್ತಿ ಮಾತ್ರ ಬಾಲಕರ 
ಮಾತನ್ನು ನಂಬುತ್ತಾನೆ. ಗ್ರಾಮಸ್ಥರಿಗೆ ಆಶ್ಚರ್ಯವಾಗುತ್ತದೆ. 
ಅವರು ವಯೋವೃದ್ಧ ವ್ಯಕ್ತಿಯನ್ನು ಪ್ರಶ್ನಾರ್ಥಕವಾಗಿ 
ನೋಡುತ್ತಾರೆ. 
ವಯೋವೃದ್ಧ ಹೇಳುತ್ತಾನೆ, 
“ಕೇವಲ ಏಳು ವರುಷದ ಮಗು ಇಂಥ ಸಾಹಸದ 
ಕೆಲಸವನ್ನು ಮಾಡುವುದು ಅದು ಹೇಗೆ ಸಾಧ್ಯ ಎಂದು 
ತಾನೆ ನೀವುಗಳು ಹುಬ್ಬೇರಿಸುತ್ತಿರುವುದು. 
ನೀವು ಇಲ್ಲೊಂದು ವಿಷಯವನ್ನು ಸ್ಪಷ್ಟವಾಗಿ ಗಮನಿಸಬೇಕು. 
ಏಳು ವರುಷದ ಬಾಲಕ ಹತ್ತು ವರುಷದ 
ಬಾಲಕನನ್ನು ಬಾವಿಯಿಂದ ಹೊರಗೆ ಎಳೆಯುತ್ತಿರುವಾಗ 
“ಇದು ನಿನ್ನಿಂದ ಆಗುವುದಿಲ್ಲ. ನಿನ್ನ ವಯಸ್ಸೇನು, ಮಾತೇನು? 
ಇಂಥ ಸಾಹಸದ,  ದುಸ್ಸಾಹಸದ ಕೆಲಸಕ್ಕೆ 
ಕೈಹಾಕಬೇಡ” ಎಂದು ಹೇಳಲು ಅಲ್ಲಿ ಯಾರೂ ಇರಲಿಲ್ಲ. 
ಅವನನ್ನು ಅಧೀರನನ್ನಾಗಿಸುವ ಒಂದು ಸಣ್ಣ ಧ್ವನಿ ಕೂಡ 
ಆತನ ಅಕ್ಕಪಕ್ಕದಲ್ಲಿರಲಿಲ್ಲ. ಅದೂ ಅಲ್ಲದೆ, 
ತನ್ನ ಮಿತ್ರನನ್ನು ಬಾವಿಯಿಂದ ಹೊರತೆಗೆಯಲು 
ತನ್ನಿಂದ ಆಗುತ್ತದೋ ಇಲ್ಲವೋ ಎಂದು 
ಯೋಚಿಸುತ್ತ ಕುಳಿತುಕೊಳ್ಳುವುದಕ್ಕೆ 
ಬಾಲಕನ ಬಳಿ ಸಮಯ ಕೂಡ ಇರಲಿಲ್ಲ. 
ಆತನ ತಲೆಯಲ್ಲಿ ಒಂದೇ ಒಂದು ವಿಷಯ ಓಡುತ್ತಿತ್ತು. 
ಅದೇನೆಂದರೆ, “ಹೇಗಾದರೂ ಮಾಡಿ 
ತನ್ನ ಸ್ನೇಹಿತನನ್ನು “ಬಚಾವು” ಮಾಡಲೇಬೇಕು. 
ಆತನನ್ನು ಬದುಕಿಸಿ ಉಳಿಸಿಕೊಳ್ಳಬೇಕು” ಎಂದು. 
ಇದು ಕಾರಣ, ಅತ ಎಲ್ಲಿಲ್ಲದ ಹುಚ್ಚು ಆವೇಶವನ್ನು 
ತನ್ನ ಪುಟ್ಟ ದೇಹದಲ್ಲಿ ತುಂಬಿಕೊಂಡು 
ಈ ಅಸಾಧ್ಯದ ಕೆಲಸವನ್ನು ಮಾಡಿದ್ದಾನೆ. 
ಅದುವೇ ಯಾರಾದರೂ ಆತನ ಅಕ್ಕಪಕ್ಕದಲ್ಲಿದ್ದರೆ 
ಇಂಥ ಸಾಹಸದ ಕೆಲಸವನ್ನು ಮಾಡುವುದಕ್ಕೆ 
ಆತನಿಂದ ಆಗುತ್ತಿರಲಿಲ್ಲ. ಎಷ್ಟೋ ಸಲ ನಾವು 
ನಮ್ಮ ಅಕ್ಕಪಕ್ಕದವರ ಮಾತುಗಳಿಗೆ ಕಿವಿಕೊಟ್ಟು 
ನಮ್ಮ ಶಕ್ತಿ, ಸಾಮರ್ಥ್ಯಗಳನ್ನು ಮೀಸಲಾತಿಗೆ 
ಒಳಪಡಿಸುತ್ತೇವೆ. 
ಅದುವೇ ನಮ್ಮ ಹಿಂಜರಿಕೆ, ಹಿಂಬಡತಿಗಳಿಗೆ 
ಕಾರಣವಾಗುತ್ತದೆ” ಎಂದು.
ವಯೋವೃದ್ಧ ಹೇಳಿದ ಮಾತಲ್ಲಿ ಸತ್ಯಾಂಶವಿದೆ. 
ನಾವು ಬಹಳಷ್ಟು ಜನಗಳು ನಮ್ಮ 
ಸುತ್ತಮುತ್ತಲಿನ ಜನಗಳ ಅಭಿಪ್ರಾಯಗಳಿಂದ 
ಆಳಲ್ಪಡುತ್ತೇವೆ. ಈ ಮಧ್ಯದಲ್ಲಿ ನಮ್ಮ 
ಅಂತಸ್ಸತ್ವವದು ನಮ್ಮಿಂದ ಅಜ್ಞಾತವಾಗಿಯೇ 
ಉಳಿದುಬಿಡುತ್ತದೆ. ಜನಗಳ ಅಭಿಪ್ರಾಯಗಳು 
ನಮ್ಮನ್ನು ಕಟ್ಟುತ್ತವೆ. ಅವುಗಳೇ 
ನಮ್ಮನ್ನು ವಿಚಲಿತಗೊಳಿಸುತ್ತವೆ. 
ನಾವುಗಳು ಜನತೆಯ 
ಅಭಿಪ್ರಾಯಗಳಿಗೆ ಕಿವಿಯಾಗುವುದಕ್ಕೆ ಮೊದಲು 
ನಮ್ಮ ಮನಸ್ಸು ಹೇಳುವ ಮಾತುಗಳನ್ನು 
ಕೇಳಿಸಿಕೊಳ್ಳಬೇಕು. 
ಜನ್ ಕೀ ಬಾತ್‌ಗಿಂತ ಮನ್ ಕೀ ಬಾತ್‌ಗೆ ಕಿವಿಯಾಗಬೇಕು. 
ಮನ್ ಕೀ ಬಾತ್‌ಗೆ ಕಿವಿಯಾದರೆ ಯಶಸ್ಸಿನ 
ಶಿಖರವಾಗಿ ನಿಂತುಕೊಳ್ಳುತ್ತೇವೆ. 
ಅದನ್ನು ಬಿಟ್ಟು, ಜನಾಭಿಪ್ರಾಯದ ಗುಲಾಮರಾದರೆ 
ಆರಕ್ಕೇರುವುದು ದೂರದ ಮಾತು, 
ಮೂರಕ್ಕಿಳಿಯದಿದ್ದರೆ ಸಾಕು ಎನ್ನುವಂತಾಗುತ್ತದೆ.  
ಡಾ. ಶ್ರೀ ಶಿವಾನಂದ ಶಿವಾಚಾರ್ಯರು
ಹಿರೇಮಠ, ತುಮಕೂರು
..................
Good Morning, Happy Monday
11th June 2018 @ Hiremath, Tumkur
ಆಸೆಯ ಗುಲಾಮನದಾರೆ ದೊರೆಯದಣ್ಣ 
ಸುಖ, ಶಾಂತಿ, ನೆಮ್ಮದಿ
ಅರಣ್ಯದಲ್ಲೊಂದು ಆನೆ ಇತ್ತು.
ಅದು ತುಂಬು ಯೌವನದಲ್ಲಿತ್ತು.
ಗಜಮದದೊಂದಿಗೆ ಅದರಲ್ಲಿ ಯೌವನಮದವೂ
ಸೇರಿಕೊಂಡಿತ್ತು. ಇದು ಕಾರಣವಾಗಿ,
ಅದು ಒಂದಷ್ಟು ತಲೆ ಕೆಟ್ಟವರ ಹಾಗೆ ವರ್ತಿಸಿಕೊಂಡಿತ್ತು.
ಅದು ಚಿಕ್ಕಪುಟ್ಟ ಪ್ರಾಣಿಗಳ ಮೇಲೆ ಸುಖಾಸುಮ್ಮನೇ
ಏರಿ ಹೋಗಿ ಅವುಗಳನ್ನು ತುಳಿದು ಸಾಯಿಸಿಬಿಡುತ್ತಿತ್ತು.
ದಿನೇ ದಿನೇ ಅದರ ಉಪಟಳ, ಉಪದ್ರವ ಹೆಚ್ಚಾಯಿತು.
ಅದರ ಆತಂಕವನ್ನು ಚಿಕ್ಕಪುಟ್ಟ ಕಾಡುಪ್ರಾಣಿಗಳು
ಸಹಿಸಿಕೊಳ್ಳದಾದವು.
ಅವುಗಳಿಗೆಲ್ಲ ಬಹುದೊಡ್ಡ ಚಿಂತೆಯಾಯಿತು.
ಅದೊಂದು ದಿನ ಕಾಡಿನ ಚಿಕ್ಕಪುಟ್ಟ ಪ್ರಾಣಿಗಳೆಲ್ಲ
ಸಭೆ ಸೇರಿದವು. ಹೇಗಾದರೂ ಮಾಡಿ ಆನೆಯ
ಉಪದ್ರವದಿಂದ ಪಾರಾಗಬೇಕು. ಚರ್ಚೆಯಲ್ಲಿ
ಪಾಲ್ಗೊಂಡ ಪ್ರಾಣಿಗಳೆಲ್ಲ ತಮಗೆ ಆನೆಯಿಂದಾದ
ಕಷ್ಟ, ಸಂಕಷ್ಟಗಳನ್ನು ಹೇಳಿಕೊಂಡವು.
“ಅಂಥ ದೊಡ್ಡ ಪ್ರಾಣಿಯಿಂದ ಅದು ಹೇಗೆ
ಬಚಾವಾಗುವುದು?” ಎಂಬ ಕುರಿತು ದೊಡ್ಡ ಪ್ರಮಾಣದಲ್ಲಿ
ಚರ್ಚೆಗಳಾದವು. “ಆನೆಯನ್ನು ಸಾಯಿಸಬೇಕು.
ಇಲ್ಲವಾದರೆ ತಮಗೆ ಉಳಿಗಾಲವಿಲ್ಲ” ಎಂದು
ಸಭೆ ತೀರ್ಮಾನವನ್ನು ತೆಗೆದುಕೊಂಡಿತು.
“ಆನೆಯನ್ನು ಸಾಯಿಸುವುದು ಹೇಗೆ
ಮತ್ತು ಆನೆಯನ್ನು ಸಾಯಿಸುವವರು ಯಾರು?”
ಈ ಕುರಿತು ಸುದೀರ್ಘವಾಗಿ ಚರ್ಚೆ ನಡೆಯಿತು.
ಸಭೆಗೆ ಯಾವೊಂದೂ ತೀರ್ಮಾನಕ್ಕೆ ಬರುವುದು ಸಾಧ್ಯವಾಗಲಿಲ್ಲ.
ಎಲ್ಲರ ಹುಬ್ಬು, ಹಣೆಗಳು ಪ್ರಶ್ನಾರ್ಥಕ ಚಿಹ್ನೆಗಳಾದವು.
ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು?
“ಆನೆಯನ್ನು ಸಾಯಿಸುವುದು ಅಸಾಧ್ಯ.
ನಮಗೆ ಸಂಕಟವೇ ಗತಿ” ಎಂದು ಪ್ರಾಣಿಗಳೆಲ್ಲ
ಹತಾಶೆಯಿಂದ ಕುಗ್ಗಿಹೋದವು.
ಅದುವರೆಗೆ ಎಲ್ಲವನ್ನೂ ಗಮನಿಸಿಕೊಂಡಿದ್ದ
ವಯೋವೃದ್ಧ ನರಿಯೊಂದು ಎದ್ದು ಮುಂದೆ ಬಂತು.
ಅದು “ನಾನು ಆನೆಯನ್ನು ಸಾಯಿಸುತ್ತೇನೆ” ಎಂದು ಹೇಳಿತು.
ಪ್ರಾಣಿಗಳೆಲ್ಲವೂ ಕತ್ತೆತ್ತಿ ಆಶ್ಚರ್ಯದಿಂದ ಮುದಿನರಿಯನ್ನು
ನೋಡತೊಡಗಿದವು. ಕೆಲವು ಪ್ರಾಣಿಗಳು ನರಿಯನ್ನು
ಗೇಲಿಮಾಡಿದವು. ಸೇರಿದ ಪ್ರಾಣಿಗಳೆಲ್ಲ ಒಕ್ಕೊರಳಿನಿಂದ
“ಆನೆಯಂಥ ಬಹುದೊಡ್ಡ ಪ್ರಾಣಿಯನ್ನು
ನೀನು ಅದು ಹೇಗೆ ಸಾಯಿಸುತ್ತಿಯಾ?” ಎಂದು ಕೇಳಿದವು.
ನರಿ ಹೇಳಿತು, “ಬುದ್ಧಿ ಮತ್ತು ವಿವೇಕದಿಂದ!!” ಎಂದು.
“ಈ ಪ್ರಪಂಚದಲ್ಲಿ ಬುದ್ಧಿ, ವಿವೇಕಕ್ಕೆ ಅಸಾಧ್ಯವಾದುದು
ಯಾವುದೂ ಇಲ್ಲ. ಇವೆರಡರ ಸರಿಯಾದ ಬಳಕೆ
ಮಾಡಿದ್ದೇ ಆದರೆ ಪ್ರಪಂಚವನ್ನೇ ಗೆಲ್ಲಬಹುದು” ಎಂದು
ನರಿ ಪ್ರಾಣಿಗಳಿಗೆ ಹೇಳಿತು.
“ನೀನು ಈ ಅಸಾಧ್ಯದ ಕೆಲಸವನ್ನು ಮಾಡಿದರೆ
ನಾವೆಲ್ಲ ನಿನ್ನನ್ನೇ ನಮ್ಮ ನಾಯಕ, ನಮ್ಮ ಸರದಾರ
ಎಂದು ಒಪ್ಪಿಕೊಳ್ಳುತ್ತೇವೆ” ಎಂದು ಪ್ರಾಣಿಗಳೆಲ್ಲ
ಏಕಕಂಠದಿಂದ ಘೋಷಿಸಿದವು.
ನರಿಯದು ಮಾರನೆಯ ದಿನ ಆನೆಯ ನಿವಾಸದ ಬಳಿಗೆ
ಹೋಯಿತು. ಆನೆಯನ್ನು ಕಂಡೊಡನೆಯೇ
“ಶ್ರೀ ಗಜರಾಜ್ ಮಹಾರಾಜ್ ಕೀ ಜೈ ಹೋ” ಎಂದು ಹೇಳಿ
ದೊಡ್ಡದೊಂದು ಉದ್ದನೆಯ ನಮಸ್ಕಾರಹಾಕಿತು.
ನಂತರ ಅದು ಆನೆಯನ್ನು ಕುರಿತು,
“ಗಜರಾಜ ಮಹಾರಾಜರೇ, ನಾವೆಲ್ಲ ಕಾಡಿನ ಪ್ರಾಣಿಗಳು
ಒಂದೆಡೆ ಸಭೆ ಸೇರಿದ್ದೇವೆ. ಕಾಡಿನ ಪ್ರಾಣಿಗಳೆಲ್ಲ ತಮ್ಮನ್ನೇ
ಕಾಡಿನ ರಾಜನನ್ನಾಗಿ ಮಾಡಬೇಕೆಂದು ಪಟ್ಟುಹಿಡಿದುಕೊಂಡು
ಕುಳಿತಿವೆ. ಅದೇಕೋ ಇತ್ತೀಚೆಗೆ, “ಕಾಡಿನ ರಾಜ” ಸಿಂಹ
ಯಾರನ್ನೂ ಸರಿಯಾಗಿ ಗಮನಿಸುತ್ತಿಲ್ಲ.
ಅದು ಯಾವ ಪ್ರಾಣಿಯ ಕಷ್ಟ, ಸುಖಕ್ಕೂ ಕಿವಿಕೊಡುತ್ತಿಲ್ಲ.
ಕಾಡಿನ ಯಾವುದೇ ಪ್ರಾಣಿ ಅದರ ಬಳಿಗೆ ಅಹವಾಲನ್ನು
ತೆಗೆದುಕೊಂಡು ಹೋದರೂ ಅದರತ್ತ ಕಣ್ಣೆತ್ತಿ ನೋಡುವುದಿಲ್ಲ.
ಅದು ತನ್ನ ಪಾಡಿಗೆ ತಾನಿದ್ದು ಬಿಡುತ್ತದೆ.
ಸಿಂಹದ ಈ ತೆರನಾದ ಬೇಜವಾಬ್ದಾರಿ ವರ್ತನೆಯಿಂದ
ಪ್ರಾಣಿಗಳಿಗೆಲ್ಲ ತುಂಬ ಬೇಸರವಾಗಿದೆ.
ಅವು ಮುನಿಸಿಕೊಂಡಿವೆ. ಕಾಡಿನ ರಾಜನೆದುರು
ಅವು ಬಂಡಾಯದ ಕಹಳೆ ಊದಿವೆ.
ಅತ್ಯಂತ ಬಲಾಢ್ಯರಾದ ತಮ್ಮನ್ನು
ಕಾಡಿನ ರಾಜನನ್ನಾಗಿ ಮಾಡಿದರೆ ತಮ್ಮಿಂದ
ಅವರ ಕಲ್ಯಾಣವಾಗುತ್ತದೆ ಎಂದು ಎಲ್ಲ ಪ್ರಾಣಿಗಳು
ತಮ್ಮ ಪರವಾಗಿ ಮತ ಚಲಾಯಿಸಿವೆ.
ಆದ್ದರಿಂದ ತಾವು ಈ ಕೂಡಲೇ ಹೊರಟುಬಿಡಿ.
ಪದಗ್ರಹಣ ಸಮಾರಂಭವು ಈ ಕೂಡಲೇ ಮತ್ತು ಈಗಲೇ
ಎಲ್ಲ ಪ್ರಾಣಿಗಳ ಸಮ್ಮುಖದಲ್ಲಿ ನಡೆದುಬಿಡಲಿ.
ತಮ್ಮನ್ನು ಒಪ್ಪಿಸಿ ಕರೆದುಕೊಂಡು ಬರುತ್ತೇನೆ
ಎಂದು ನಾನು ಪ್ರಾಣಿಗಳಿಗೆಲ್ಲ ಮಾತುಕೊಟ್ಟು
ಬಂದಿದ್ದೇನೆ” ಎಂದು.
ನರಿಯ ಮಾತುಗಳನ್ನು ಕೇಳುತ್ತಲೇ
ಆನೆಯ ಅಗಲವಾದ ದೇಹ ಇನ್ನಷ್ಟು, ಮತ್ತಷ್ಟು
ಅಗಲವಾಗತೊಡಗಿತು.
ಅದಕ್ಕೆ ಖುಷಿಯೋ ಖುಷಿ!!
ಇನ್ನು ಮುಂದೆ ತಾನು “ಕಾಡಿನ ರಾಜ” ಎಂದು
ಯೋಚಿಸುತ್ತಲೇ ಅದರ ಉತ್ಸಾಹ ಇಮ್ಮಡಿ, ಮುಮ್ಮಡಿಗೊಂಡಿತು.
ಅದು ನರಿಯೊಂದಿಗೆ ಹೊರಡಲು ತತ್‌ಕ್ಷಣವೇ ಸಿದ್ಧವಾಯಿತು.
ಮುದಿನರಿ ಮುಂದೆ ಮುಂದೆ ಹೆಜ್ಜೆ ಹಾಕತೊಡಗಿತು.
ಅದರ ಹಿಂದೆ ಗಜಗಾಂಭೀರ್ಯಕ್ಕೆ ವಿದಾಯ ಹೇಳಿಬಿಟ್ಟು
ಆನೆಯದು ರಾಜಗಾಂಭೀರ್ಯದಿಂದ ಹೆಜ್ಜೆ ಹಾಕತೊಡಗಿತು.
ಬುದ್ಧಿವಂತ ಮುದಿನರಿಯದು ಎಲೆಗಳಿಂದ ಮುಚ್ಚಲ್ಪಟ್ಟ
ಒಂದು ದೊಡ್ಡ ಕೆಸರುಮಡುವಿನ ಬಳಿ ಆನೆಯನ್ನು
ಕರೆತಂದಿತು. ತಾನು ಮಾತ್ರ ಬುದ್ಧಿವಂತಿಕೆಯಿಂದ
ಪಕ್ಕದಲ್ಲಿ ನಡೆದುಕೊಂಡು ಹೋಗಿ
ಆನೆಯದು ಕೆಸರುಹೊಂಡದಲ್ಲಿ ಹೆಜ್ಜೆ ಇಡುವಂತೆ ಮಾಡಿತು.
ಕೆಸರುಹೊಂಡದಲ್ಲಿ ಹೆಜ್ಜೆ ಇಡುತ್ತಲೇ ಆನೆಯದು
ಕೆಸರುಹೊಂಡದ ಆಳದಲ್ಲಿ ಇಳಿಯತೊಡಗಿತು.
ಆನೆಯದು ತನ್ನೆಲ್ಲ ಶಕ್ತಿಯನ್ನು ಉಪಯೋಗಿಸಿ ಮೇಲೆ
ಬರಬೇಕೆಂದಷ್ಟೂ ಅದು ಕೆಸರಿನ ಆಳ, ಆಳಕ್ಕೆ
ಮತ್ತು ಆಳದಲ್ಲಿ ಇಳಿಯತೊಡಗಿತು.
ಆನೆಯದು ಸಹಾಯಕ್ಕಾಗಿ ನರಿಯನ್ನು ಕೂಗಿಕೊಂಡಿತು.
ನರಿಯದು ಮುಗುಳ್ನಗುತ್ತ ಅಲ್ಲಿಂದ ಜಾಗ ಖಾಲಿಮಾಡಿತು.
ರಾಜನಾಗಬೇಕೆಂಬ ಅತಿಯಾದ ಆಸೆ ಮತ್ತು ಆತುರ ಆನೆಯನ್ನು
ಕೆಸರಿನ ಖೆಡ್ಡಾಕ್ಕೆ ತಳ್ಳಿತು.
ಅದು ಮೇಲೆದ್ದು ಬರದ ಹಾಗೆ ಮಾಡಿತು.
“ಆಸೆಯೇ ದುಃಖಕ್ಕೆ ಕಾರಣ” ಎಂಬ ಬುದ್ಧನ ಮಾತಿಗೆ
ಮತ್ತೊಂದು ನಿದರ್ಶನ ದೊರಕಿತು.
ಆಸೆಗೆ “ಅಜವಾದರೇನು, ಗಜವಾದರೇನು?
ಆಳಾದರೇನು, ಅರಸನಾದರೇನು?” ಎಲ್ಲರ ವಿಷಯದಲ್ಲೂ
ಅದು ಸಮತಾವಾದವನ್ನು ಮಾತನ್ನಾಡಿಕೊಂಡಿದೆ.
“ಆತುರದ ಅರಸೊತ್ತಿಗೆ ಅಪಾಯದ ಹೆದ್ದಾರಿ” ಇದ್ದ ಹಾಗೆ.
ಆಸೆ, ಆತುರಗಳ ವಿಷಯದಲ್ಲಿ ತುಂಬ ಹುಷಾರಾಗಿರಬೇಕು.
ಆಸೆಯ ಗುಲಾಮರಾದರೆ ದೊರೆಯದಣ್ಣ ಸುಖ, ಶಾಂತಿ, ನೆಮ್ಮದಿ.
ಇದು ಕೇವಲ ಏಕವಾರ ಸತ್ಯವಲ್ಲ;
ಇದು ತ್ರಿವಾರ ಸತ್ಯ ಮತ್ತು ತ್ರಿಕಾಲ ಸತ್ಯ. 
ಡಾ. ಶಿವಾನಂದ ಶಿವಾಚಾರ್ಯರು
ಹಿರೇಮಠ, ತುಮಕೂರು


................

ಶ್ರೀಗಳ ಮುಂದಿನ ಎಲ್ಲಾ ಅಪ್ಡೇಟ್ ಪಡೆಯಿರಿ ಶ್ರೀಗಳ facebook page ನಲ್ಲಿ....
ಶ್ರೀಗಳ facebook page link

ಶುಕ್ರವಾರ, ಜೂನ್ 8, 2018

ವಚನಾಂತರಂಗ ಸಂಗ್ರಹ

ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳವರ ಕೃಪಾಶೀರ್ವಾದ









ಮುಂದಿನ ವಚನಾಂತರಂಗ ಅಂಕಣ ಹಾಗೂ ಶ್ರೀಗಳ ದಿನನಿತ್ಯದ ಅಪ್ಡೇಟ್ ಈ ಕೆಳಕಂಡ ಲಿಂಕ್ ನಲ್ಲಿ ದೊರೆಯಲಿದೆ...

ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳವರ ಸಾಂಧರ್ಭಿಕ ಸೂಕ್ತಿಗಳು

ಶ್ರೀ ಶಿವಾನಂದ ಶಿವಾಚಾರ್ಯ ಮಹಾಸ್ವಾಮಿಗಳವರ ಕೃಪಾಶೀರ್ವಾದದೊಂದಿಗೆ


.

















ಶ್ರೀಗಳ ಸಾಂದರ್ಭಿಕ ಸೂಕ್ತಿ ಹಾಗೂ ಮುಂದಿನ ಎಲ್ಲಾ ರೀತಿಯ ಅಂಕಣಗಳು ಶ್ರೀಗಳ Facebook page ನಲ್ಲಿ ಅಪ್ಡೇಟ್ ಆಗುವುದು...
ಈ ಕೆಳಕಂಡ ಲಿಂಕ್ ಕ್ಲಿಕ್ಕಿಸಿದಲ್ಲಿ ಶ್ರೀಗಳ facebook page ತಲುಪಬಹುದು...

Facebook page link